ದೇರ್ ಅಲ್-ಬಾಲಾಹ್ ನಲ್ಲಿರುವ ಮನೆಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕೇವಲ ನಾಲ್ಕು ದಿನಗಳ ನವಜಾತ ಅವಳಿ ಮಕ್ಕಳು ಮೃತಪಟ್ಟಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಅವಳಿ ಮಕ್ಕಳ ತಂದೆ ಮೊಹಮ್ಮದ್ ಅಬು ಅಲ್-ಕುಮ್ಸಾನ್ ಘಟನೆಯ ವೇಳೆ ಸ್ಥಳೀಯ ಸರ್ಕಾರಿ ಕಚೇರಿಯಲ್ಲಿ ಮಕ್ಕಳ ಜನನವನ್ನು ನೋದಾಯಿಸಲು ತೆರಳಿದ್ದರು. ಘಟನೆಯ ಬಗ್ಗೆ ಮೊಹಮ್ಮದ್ ಗೆ ಕರೆ ಮಾಡಿದ ಸ್ಥಳೀಯರು ಮನೆಯ ಮೇಲೆ ಬಾಂಬ್ ಹಾಕಲಾಗಿದೆ ಎಂದು ಮಾಹಿತಿ ನೀಡಿದರು. ವೈಮಾನಿಕ ದಾಳಿಯು ನವಜಾತ ಶಿಶುಗಳ ಜೊತೆಗೆ ಮಕ್ಕಳ ತಾಯಿ ಹಾಗೂ ಅಜ್ಜಿಯ ಜೀವವನ್ನೂ ಬಲಿ ತೆಗೆದುಕೊಂಡಿತು.
“ಏನಾಯಿತು ಎಂದು ನನಗೆ ತಿಳಿದಿಲ್ಲ” ಎಂದು ಮೊಹಮ್ಮದ್ ಆಘಾತದಿಂದ ಹೇಳಿದರು. “ಅದು ಮನೆಗೆ ಅಪ್ಪಳಿಸಿದ ಶೆಲ್ ಎಂದು ನನಗೆ ತಿಳಿಸಲಾಗಿದೆ.” “ಮಕ್ಕಳ ಜನನವನ್ನು ಆಚರಿಸಲು ಸಹ ನನಗೆ ಸಮಯವಿರಲಿಲ್ಲ” ಎಂದು ಅವರು ಹೇಳಿದರು.
ಹಮಾಸ್ ನಡೆಸುತ್ತಿರುವ ಗಾಝಾದ ಆರೋಗ್ಯ ಸಚಿವಾಲಯವು ಪ್ರಸ್ತುತ ನಡೆಯುತ್ತಿರುವ ಸಂಘರ್ಷದ ಸಮಯದಲ್ಲಿ 115 ಶಿಶುಗಳು ಜನಿಸಿ ನಂತರ ಕೊಲ್ಲಲ್ಪಟ್ಟಿವೆ ಎಂದು ವರದಿ ಮಾಡಿದೆ.
ಇಸ್ರೇಲ್-ಗಾಝಾ ಯುದ್ಧದ ಆರಂಭಿಕ ವಾರಗಳಲ್ಲಿ ಗಾಝಾ ನಗರವನ್ನು ಸ್ಥಳಾಂತರಿಸಲು ಇಸ್ರೇಲಿ ಸೇನೆಯ ಸೂಚನೆಗಳನ್ನು ಅನುಸರಿಸಿ ಅಬು ಅಲ್-ಕುಮ್ಸಾನ್ ಅವರ ಕುಟುಂಬವು ಗಾಝಾ ಪಟ್ಟಿಯ ಕೇಂದ್ರ ಭಾಗದಲ್ಲಿ ಸುರಕ್ಷತೆಯನ್ನು ಬಯಸಿತ್ತು.
ನಾಗರಿಕರ ಸಾವುನೋವುಗಳನ್ನು ತಪ್ಪಿಸಲು ತಾನು ಪ್ರಯತ್ನಿಸುತ್ತಿದ್ದೇನೆ ಎಂದು ಇಸ್ರೇಲ್ ಸಮರ್ಥಿಸಿಕೊಂಡಿದೆ, ದಟ್ಟವಾದ ವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕಾಗಿ ಮತ್ತು ನಾಗರಿಕರನ್ನು ಬಳಸುತ್ತಿರುವುದಕ್ಕಾಗಿ ಹಮಾಸ್ ಮೇಲೆ ಆರೋಪ ಕೇಳಿ ಬಂದಿದೆ.