ನೆಲ್ಲೂರು: ನೆಲ್ಲೂರಿನಲ್ಲಿ (Nellore) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಖಾಸಗಿ ಕಾಲೇಜಿನಲ್ಲಿ ಬಿ. ಟೆಕ್ ಓದುತ್ತಿದ್ದ ಯುವತಿ ಗರ್ಭಪಾತಕ್ಕೆ ಒಳಗಾಗಿ ತರಗತಿಯ ಕೊಠಡಿಯಲ್ಲೇ ಸಾವನ್ನಪ್ಪಿದ್ದಾಳೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಬಹಿರಂಗಪಡಿಸಿದ ವಿವರಗಳ ಪ್ರಕಾರ, ಮರ್ರಿಪಾಡು ಮಂಡಲದ 19 ವರ್ಷದ ಯುವತಿ ನೆಲ್ಲೂರಿನಲ್ಲಿ ಬಿ. ಟೆಕ್ ದ್ವಿತೀಯ ವರ್ಷ ಓದುತ್ತಿದ್ದಳು (B Tech student).
ಇದೇ ತಿಂಗಳ 11ರಂದು ತನ್ನ ಸಹಪಾಠಿಗಳೆಲ್ಲ ಹೊರಗಡೆ ಇರುವಾಗ… ತಾನು ಒಬ್ಬಳು ಮಾತ್ರ ತರಗತಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಬಹಳ ಹೊತ್ತಾದರೂ ಹೊರಗೆ ಬಾರದೇ ಇದ್ದ ಕಾರಣ ಸ್ನೇಹಿತೆಯರು ಬಾಗಿಲು ಒಡೆದು ನೋಡಿದಾಗ ಯುವತಿ ತೀವ್ರ ರಕ್ತಸ್ರಾವವಾಗಿ ತರಗತಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ (Abortion). ಇನ್ನೂ ಆಘಾತಕಾರಿ ಸಂಗತಿಯೆಂದರೆ ಆ ವಿದ್ಯಾರ್ಥಿನಿಯ ಪಕ್ಕದಲ್ಲಿ 6 ತಿಂಗಳ ಭ್ರೂಣವಿತ್ತು! ಕೂಡಲೇ ಸಹಪಾಠಿಗಳೆಲ್ಲ ಸೇರಿ ತಾಯಿ ಹಾಗೂ ಭ್ರೂಣವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಾಯಿ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಮಾಹಿತಿ ಪಡೆದ ನೆಲ್ಲೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿವರ ಸಂಗ್ರಹಿಸಿದ್ದಾರೆ.
ಬಾಲಕಿಯ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.ತರಗತಿಯಲ್ಲಿಯೇ ಗರ್ಭಪಾತವಾಯಿತಾ? ಅಥವಾ YouTube ವೀಡಿಯೊ ಮೂಲಕ ತನಗೆ ತಾನೇ ಸ್ವಯಂ ಅಬಾರ್ಷನ್ ಮಾಡಿಕೊಂಡಳಾ? ಪೊಲೀಸರು ಈ ಬಗ್ಗೆ ವಿವರ ಸಂಗ್ರಹಿಸುತ್ತಿದ್ದಾರೆ. ಯುವತಿಯ ಸೆಲ್ ಫೋನ್ ವಶಪಡಿಸಿಕೊಂಡ ಪೊಲೀಸರು, ಅದರಲ್ಲಿನ ಡೇಟಾ ಕಲೆಹಾಕಿದ್ದಾರೆ. ಅದರ ಆಧಾರದ ಮೇಲೆ ಆಕೆ ಅನಂತಸಾಗರ ಪ್ರದೇಶದ ಕಾರು ಚಾಲಕನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಳು ಎಂದು ತಿಳಿದುಬಂದಿದೆ. ಮುಂದಿನ ತನಿಖೆ ನಡೆಯಬೇಕಿದೆ.