ಪ್ಯಾರಿಸ್: 2024ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲ ದಿನವೇ ಭಾರತಕ್ಕೆ ಗುಡ್ನ್ಯೂಸ್ ಸಿಕ್ಕಿದೆ. ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಸರಬ್ಜೋತ್ ಸಿಂಗ್ ಮತ್ತು ಅರ್ಜುನ್ ಸಿಂಗ್ ಚೀಮಾ ಅರ್ಹತಾ ಸುತ್ತಿನಲ್ಲಿ ಹೊರಬಿದ್ದು ನಿರಾಸೆ ಮೂಡಿಸಿದ್ದರು.
ಈ ಬೆನ್ನಲ್ಲೇ ಮಹಿಳೆಯರ ಸಿಂಗಲ್ಸ್ನಲ್ಲಿ ಮನು ಭಾಕರ್ ಫೈನಲ್ಗೆ ಲಗ್ಗೆಯಿಡುವ ಮೂಲಕ ಭಾರತಕ್ಕೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
22 ವರ್ಷ ವಯಸ್ಸಿನ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 580 ಅಂಕಗಳೊಂದಿಗೆ 3ನೇ ಸ್ಥಾನ ಗಳಿಸುವ ಮೂಲಕ ಫೈನಲ್ಗೆ ಅರ್ಹತೆ ಪಡೆದುಕೊಂಡರು. ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವೈಯಕ್ತಿಕ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಶೂಟರ್ ಸಹ ಎನಿಸಿಕೊಂಡರು.
2004ರಲ್ಲಿ ಅಥೆನ್ಸ್ನಲ್ಲಿ ನಡೆದ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಸುಮಾ ಶಿರೂರ್ ಕೊನೆಯ ಬಾರಿಗೆ ಫೈನಲ್ ತಲುಪಿದ್ದರು. ಇದರಲ್ಲಿ ಹಂಗೇರಿಯ ಏಸ್ ವೆರೋನಿಕಾ ಮೇಜರ್ 582 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಇತರ ಭಾರತೀಯ ಪ್ರತಿನಿಧಿ ರಿದಮ್ ಸಾಂಗ್ವಾನ್ 573 ಅಂಕಗಳೊಂದಿಗೆ 15ನೇ ಸ್ಥಾನ ಪಡೆದರು. ಭಾನುವಾರ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ.