ಮುಂದಿನ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸದೆ. ಕಮಲಾ ಹ್ಯಾರಿಸ್ ಹಾಗೂ ಡೋನಾಲ್ಡ್ ಟ್ರಂಪ್ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಅರಿಝೋನಾದಲ್ಲಿನ ಕಮಲಾ ಹ್ಯಾರಿಸ್ ಅವರ ಚುನಾವಣಾ ಪ್ರಚಾರ ಕಚೇರಿಯ ಮೇಲೆ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ ಕಚೇರಿಗೆ ಹಾನಿಯಾಗಿದೆ. ಆದರೆ, ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಅರಿಝೋನಾ ರಾಜ್ಯಕ್ಕೆ ಇನ್ನು ಕೆಲವೇ ದಿನಗಳಲ್ಲಿ ಕಮಲಾ ಹ್ಯಾರಿಸ್ ಭೇಟಿ ನೀಡುವವರಿದ್ದರು. ಅದಕ್ಕೂ ಮುನ್ನವೇ ಈ ದಾಳಿ ನಡೆದಿದೆ. ಘಟನೆಯ ತನಿಖೆಯನ್ನು ಟೆಂಪೆ ಪೊಲೀಸರು ನಡೆಸುತ್ತಿದ್ದಾರೆ.
ಗುಂಡಿನ ದಾಳಿ ಸಂದರ್ಭದಲ್ಲಿ ಡೆಮಾಕ್ರಟಿಕ್ ಪಕ್ಷದ ಕಚೇರಿಯಲ್ಲಿ ಯಾವುದೇ ಜೀವಹಾನಿ ಸಂಭವಿಸದೆ ಇರುವುದರಿಂದ ಪೊಲೀಸರು ಆಸ್ತಿಪಾಸ್ತಿ ನಷ್ಟ ಪ್ರಕರಣವನ್ನು ಮಾತ್ರ ದಾಖಲಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 16ರಂದೂ ಕೂಡಾ ಈ ಕಚೇರಿಯ ಮೇಲೆ ಪೆಲೆಟ್ ಅಥವಾ ಬಿಬಿ ಗನ್ ಮೂಲಕ ಹಲವು ಸುತ್ತಿನ ಗುಂಡಿನ ದಾಳಿ ನಡೆದಿತ್ತು ಎಂದು Arizona Republic ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗುಂಡಿನ ದಾಳಿಯಲ್ಲಿ ಡೆಮಾಕ್ರಟಿಕ್ ಪಕ್ಷದ ಬಾಗಿಲಿಗೆ ಎರಡು ಗುಂಡು ತಗುಲಿರುವುದು ಹಾಗೂ ಇನ್ನೆರಡು ಗುಂಡುಗಳು ಕಿಟಕಿಗಳಿಗೆ ತಗುಲಿರುವ ವಿಡಿಯೊವನ್ನು ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿವೆ.