ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈಯ ಬಾಂದ್ರಾದ ನಿವಾಸದೆದುರು ಏಪ್ರಿಲ್ 14ರಂದು ನಡೆದ ಗುಂಡಿನ ದಾಳಿಗೆ ಸಂಬಂಧಪಟ್ಟಂತೆ ಮಹತ್ವದ ಸುಳಿವು ಸಿಕ್ಕಿದೆ. ಬೈಕ್ನಲ್ಲಿ ಬಂದು ಗುಂಡು ಹಾರಿಸಿದ ಹೋಗಿದ್ದ ಇಬ್ಬರು ಶಂಕಿತರನ್ನು ಮುಂಬೈ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಏ.14ರಂದು ಮುಂಜಾನೆ 5 ಗಂಟೆ ಸುಮಾರಿಗೆ ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ಸದ್ದು ಕೇಳಿ ಬಂದಿತ್ತು. ಇದೀಗ ಈ ದಾಳಿಯಲ್ಲಿ ತಮ್ಮದೇ ಕೈವಾಡವಿದೆ ಎಂದು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಹೇಳಿಕೊಂಡಿದ್ದರು. ಅನ್ಮೋಲ್ ಈಗ ಅಮೆರಿಕದಲ್ಲಿದ್ದು, ಸಲ್ಮಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಹೊಣೆ ಹೊತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸಿಸಿಟಿವಿ ದೃಶ್ಯದಲ್ಲಿ ಕಾಣಿಸಿಕೊಂಡ 2 ಶೂಟರ್ಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅನ್ಮೋಲ್ನ ಫೇಸ್ಬುಕ್ ಪೇಜ್ನಲ್ಲಿ, ಈ ಘಟನೆ ಟ್ರೈಲರ್ ಮಾತ್ರ. ಇದಕ್ಕಿಂತಲೂ ಭೀಕರ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ಸಲ್ಮಾನ್ ಖಾನ್ಗೆ ಎಚ್ಚರಿಕೆ ನೀಡಿದ್ದರು. ಸಲ್ಮಾನ್ ಖಾನ್ ಇದು ನಾವು ನಿಮಗೆ ತೋರಿಸಿದ್ದು, ಟ್ರೈಲರ್ ಮಾತ್ರ. ನಮ್ಮ ಸಾಮರ್ಥ್ಯ, ಶಕ್ತಿ ಏನು ಎಂಬುದರ ಪರಿಚಯ ಮಾಡಲು ಈ ಕ್ರಮ ಕೈಗೊಂಡಿದ್ದೇವೆ. ಇದು ನಾವು ನೀಡುವ ಮೊದಲ ಮತ್ತು ಕೊನೆಯ ವಾರ್ನಿಂಗ್ ಎಂದು ಬರೆದಕೊಂಡಿದ್ದಾನೆ.