ಭೋಪಾಲ್: ಸಾಕು ಶ್ವಾನಗಳಿಂದಾಗಿ ಎರಡು ಮನೆ ಮಾಲೀಕರ ನಡುವೆ ನಡೆದ ಜಗಳ ಇಬ್ಬರನ್ನು ಹತ್ಯೆ ಮಾಡುವಲ್ಲಿ ಕೊನೆಯಾದ ಘಟನೆ ಮಧ್ಯಪ್ರದೇಶದ ಇಂದೋರ್ (Indore) ನಲ್ಲಿ ನಡೆದಿದೆ. ಇಬ್ಬರನ್ನು ಗುಂಡಿಕ್ಕಿ ಕೊಂದ ಆರೋಪಿಯನ್ನು ರಾಜ್ಪಾಲ್ ಸಿಂಗ್ ರಾಜಾವತ್ ಎಂದು ಗುರುತಿಸಲಾಗಿದ್ದು, ಈತ ಬ್ಯಾಂಕ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ Security Guard in Bank) ಆಗಿ ಕೆಲಸ ಮಾಡುತ್ತಿದ್ದ. ಈತ ತನ್ನ ಮನೆಯ ಬಾಲ್ಕನಿಯಿಂದ ಶೂಟೌಟ್ ಮಾಡಿ ಇಬ್ಬರ ಕೊಲೆಗೆ ಕಾರಣವಾಗಿದ್ದಾನೆ. ಅಲ್ಲದೆ ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ.
ರಾಜಾವತ್ ಮತ್ತು ಅವರ ನೆರೆಹೊರೆಯವರಾದ ವಿಮಲ್ ಅಚಲಾ (35) ರಾತ್ರಿ 11 ಗಂಟೆಗೆ ಕೃಷ್ಣಾ ಬಾಗ್ ಕಾಲೋನಿಯ ಕಿರಿದಾದ ಲೇನ್ನಲ್ಲಿ ತಮ್ಮ ಸಾಕುನಾಯಿಗಳನ್ನು ಹಿಡಿದು ನಡೆದುಕೊಂಡು ಹೋಗುತ್ತಿದ್ದಾಗ ಎರಡೂ ಶ್ವಾನಗಳು ಜಗಳ ಮಾಡಿಕೊಂಡವು. ಈ ವೇಳೆ ಶ್ವಾನಗಳ ಮಾಲೀಕರ ನಡುವೆಯೂ ವಾಗ್ವಾದ ನಡೆಯಿತು. ಇದೇ ಸಿಟ್ಟಿನಿಂದ ಬಂದ ರಾಜಾವತ್, ತನ್ನ 12-ಬೋರ್ ರೈಫಲ್ನೊಂದಿಗೆ ಮನೆಯ ಬಾಲ್ಕನಿಯ ಮೇಲೇರಿದ್ದಾನೆ. ನಂತರ ಅಲ್ಲಿಂದಲೇ ಶೂಟೌಟ್ ಮಾಡಿದ್ದಾನೆ.