ಭಾರತದಲ್ಲಿ ಅಕ್ಟೋಬರ್–ನವೆಂಬರ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡ ಭಾಗವಹಿಸುವುದಿಲ್ಲವಾ? ಈ ಪ್ರಶ್ನೆಗೆ ಇದುವರೆಗೆ ಪಾಕ್ ಕ್ರಿಕೆಟ್ ಮಂಡಳಿ ಐಸಿಸಿಗೆ ಉತ್ತರ ನೀಡಿಲ್ಲ. ಇದರ ನಡುವೆ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡದ ಭಾಗವಹಿಸುವಿಕೆಯನ್ನು ಖಚಿತ ಪಡಿಸಲು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ನೇತೃತ್ವದ ಸಮಿತಿಯನ್ನು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ರಚಿಸಿದ್ದಾರೆ.
ಉಭಯ ದೇಶಗಳ ನಡುವಿನ ಸಂಬಂಧದಿಂದ ಹಿಡಿದು ಕ್ರೀಡೆಯನ್ನು ರಾಜಕೀಯದಿಂದ ದೂರವಿಡುವ ಮಹತ್ವದವರೆಗಿನ ಎಲ್ಲಾ ಅಂಶಗಳನ್ನು ಸಮಿತಿಯು ಚರ್ಚಿಸಲಿದೆ. ಹಾಗೆಯೇ ಈ ಸಮಿತಿಯ ಸದಸ್ಯರು ಭಾರತಕ್ಕೂ ಆಗಮಿಸಿ ಪರಿಶೀಲಿಸಲಿದೆ ಎಂದು ವರದಿಯಾಗಿದೆ. ಇದಾದ ಬಳಿಕ ಪಾಕ್ ಪ್ರಧಾನಿಗೆ ವರದಿ ಸಲ್ಲಿಸಲಿದ್ದು, ಆ ಬಳಿಕವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
ಈಗಾಗಲೇ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆದರೆ ಪಾಕ್ ತಂಡದ ಭಾಗವಹಿಸುವಿಕೆಯನ್ನು ಇನ್ನೂ ಕೂಡ ದೃಢಪಡಿಸಲಾಗಿಲ್ಲ. ಅಲ್ಲದೆ ಪಾಕಿಸ್ತಾನ್ ತಂಡದ ಪಾಲ್ಗೊಳ್ಳುವಿಕೆಗೆ ಸರ್ಕಾರದ ಅನುಮತಿಯ ಅಗತ್ಯವಿದೆ ಎಂದು ಪಿಸಿಬಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸಿದೆ.
ಇದೀಗ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕ್ರೀಡಾ ಸಚಿವ ಅಹ್ಸಾನ್ ಮಜಾರಿ, ಮರ್ಯಮ್ ಔರಂಗಜೇಬ್, ಅಸದ್ ಮಹಮೂದ್, ಅಮೀನ್ ಉಲ್ ಹಕ್, ಕಮರ್ ಜಮಾನ್ ಕೈರಾ ಮತ್ತು ಮಾಜಿ ರಾಜತಾಂತ್ರಿಕ ತಾರಿಕ್ ಫಾತ್ಮಿ ಒಳಗೊಂಡ ಸಮಿತಿಯನ್ನು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ರಚಿಸಿದ್ದಾರೆ.
ಪಾಕ್ ತಂಡಕ್ಕೆ ನಿಗದಿಯಾಗಿರುವ ಸ್ಥಳಗಳನ್ನು ಪರಿಶೀಲಿಸಲು, ಭದ್ರತಾ ವ್ಯವಸ್ಥೆಗಳ ಮಾಹಿತಿ ಪಡೆಯಲು ನಿಯೋಗವೊಂದನ್ನು ಭಾರತಕ್ಕೆ ಕಳುಹಿಸಲಾಗುತ್ತದೆ. ಇದಾದ ಬಳಿಕ ಅಂತಿಮ ವರದಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರೂ ಆಗಿರುವ ಪ್ರಧಾನಿಗೆ ಸಲ್ಲಿಸಲಿದ್ದಾರೆ. ಆ ಬಳಿಕ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಇತ್ತ ಪಾಕಿಸ್ತಾನ್ ತಂಡದ ಪಂದ್ಯಗಳಿಗೆ ಹೈದರಾಬಾದ್, ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದ ಮೈದಾನಗಳು ಆತಿಥ್ಯವಹಿಸಲಿದೆ. ಅಲ್ಲದೆ ಭಾರತ–ಪಾಕಿಸ್ತಾನ್ ನಡುವಣ ಪಂದ್ಯವು ಅಕ್ಟೋಬರ್ 15 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದು, ಇದಾಗ್ಯೂ ಟೂರ್ನಿಯಲ್ಲಿ ಭಾಗವಹಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭದ್ರತಾ ವ್ಯವಸ್ಥೆಯ ನೆಪಗಳನ್ನು ಹೇಳುತ್ತಿರುವುದು ವಿಪರ್ಯಾಸ.