ಬಹಳ ವರ್ಷಗಳಿಂದ ಟೀಂ ಇಂಡಿಯಾವನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಅದು ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್. ಯುವರಾಜ್ ಸಿಂಗ್ ಬಳಿಕ ಈ ಕ್ರಮಾಂಕದಲ್ಲಿ ಸಮರ್ಥವಾಗಿ ಬ್ಯಾಟ್ ಬೀಸುವ ಮತ್ತೊಬ್ಬ ಆಟಗಾರ ಟೀಂ ಇಂಡಿಯಾಕ್ಕೆ ಸಿಕ್ಕಿಲ್ಲ. ಆದರೆ ಶ್ರೇಯಸ್ ಅಯ್ಯರ್ ರೂಪದಲ್ಲಿ ಈ ಸ್ಥಾನಕ್ಕೆ ಕೊಂಚ ನ್ಯಾಯ ಒದಗಿಸಲಬಲ್ಲ ಆಟಗಾರ ಸಿಕ್ಕಿದ್ದಾನೆ. ಆದರೆ ಇಂಜುರಿಯಿಂದ ಚೇತರಿಸಿಕೊಂಡು ಬಹಳ ದಿನಗಳ ಬಳಿಕ ಮೈದಾನಕ್ಕೆ ಮರಳಿರುವ ಅಯ್ಯರ್ ಕೂಡ ಪಾಕ್ ವಿರುದ್ಧ ಹೆಚ್ಚು ಸದ್ದು ಮಾಡಲಿಲ್ಲ.
ಆರಂಭಿಕ ಆಘಾತದ ನಡುವೆ ಮೈದಾನಕ್ಕೆ ಬಂದ ಶ್ರೇಯಸ್ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಉತ್ತಮ ಆರಂಭ ಪಡೆದುಕೊಂಡರು. ಇದರಿಂದ ಶ್ರೇಯಸ್ ಉತ್ತಮ ಇನ್ನಿಂಗ್ಸ್ ಆಡುತ್ತಾರೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. 14 ರನ್ ಗಳಿಸಿ ಆಡುತ್ತಿದ್ದ ಅಯ್ಯರ್ ಅವರನ್ನು ಪಾಕ್ ವೇಗಿ ಹ್ಯಾರಿಸ್ ರೌಫ್ 10 ನೇ ಓವರ್ನಲ್ಲಿ ಔಟ್ ಮಾಡಿದರು. ಆದರೆ ಇದಕ್ಕೂ ಮುನ್ನ ರೌಫ್ ಎಸೆದ ಮಾರಕ ಬಾಲ್ ಅಯ್ಯರ್ ಅವರ ಬ್ಯಾಟನ್ನು ಎರಡು ಹೊಳಾಗುವಂತೆ ಮಾಡಿತು. ವಾಸ್ತವವಾಗಿ ಅಯ್ಯರ್ ಬಾರಿಸಿದ 2 ಬೌಂಡರಿಗಳಲ್ಲಿ ಒಂದು ಬೌಂಡರಿ ರೌಫ್ ಎಸೆತದಲ್ಲಿ ಬಂತು. ಆದರೆ ಆ ಬೌಂಡರಿ ಬಂದಿದ್ದು ಮಾತ್ರ ವಿಚಿತ್ರವಾಗಿತ್ತು.
ರೌಫ್ ಎಸೆದ ಆ ಎಕ್ಸ್ಪ್ರೆಸ್ ವೇಗದ ಎಸೆತವು ಅಯ್ಯರ್ ಅವರ ಬ್ಯಾಟ್ಗೆ ಬಡಿಯಿತು. ರೌಫ್ ಎಸೆದ ಎಸೆತದ ವೇಗ ಎಷ್ಟಿತ್ತಂದರೆ, ಚೆಂಡು ಬಡಿದ ಕೂಡಲೇ ಶ್ರೇಯರ್ ಬ್ಯಾಟ್ ಎರಡು ಪೀಸ್ ಆಯಿತು. ಇಲ್ಲಿ ಇನ್ನೊಂದು ಮೋಜಿನ ಸಂಗತಿಯೆಂದರೆ, ಬ್ಯಾಟ್ ಹೊಳಾದ ನಂತರವೂ ಚೆಂಡು ಬೌಂಡರಿ ಗೆರೆ ದಾಟಿತು. ಇದೀಗ ಆ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.