ಮಂಡ್ಯ :- ಮದ್ದೂರು ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಗುರುವಾರ ವಿಜ್ರಂಭಣೆಯಿಂದ ನೆರವೇರಿತು. ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳ ರಥೋತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸುವ ಮೂಲಕ ಧನ್ಯತಾ ಭಾವ ಮೆರೆದರು.
ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಉಗ್ರ ನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಶ್ರೀಮನ್ ನಾರಾಯಣ, ಶ್ರೀದೇವಿ, ಭೂದೇವಿ ಸಮೇತ ವಿಶೇಷ ಪುಷ್ಪಾಲಂಕಾರದೊಂದಿಗೆ ಮಂಟಪೋತ್ಸವ ಸೇವೆ ಜರುಗಿದವು. ಮಧ್ಯಾಹ್ನ 11.30 ರಿಂದ 12 ಗಂಟೆಯೊಳಗೆ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ದೇವರ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಗೋವಿಂದ ನಾಮಸ್ಮರಣೆಯೊಂದಿಗೆ ಭಕ್ತಾಧಿಗಳು ರಥ ಎಳೆದು ಹರ್ಷೋದ್ಧಾರ ವ್ಯಕ್ತಪಡಿಸಿದರು. ರಥ ಸಾಗಿದ ಕೋಟೆ ಬೀದಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅರವಟ್ಟಿಗೆಗಳನ್ನು ತೆರೆದು ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತಲ್ಲದೆ ಶ್ರೀ ನರಸಿಂಹ ಸ್ವಾಮಿ ಸೇವಾ ಸಮಿತಿ, ಬ್ರಾಹ್ಮಣ ಸಭಾ ಹಾಗೂ ಶಿವಕೃಪ ಎಂಟರ್ ಪ್ರೈಸಸ್ ಮಾಲೀಕ ಬಿ.ವಿ.ಮಂಜುನಾಥ್ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರೀ ಉಗ್ರ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ ಅಂಗವಾಗಿ ಮೇ.3 ರಿಂದ ದೇಗುಲದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿದ್ದು, 15 ದಿನಗಳ ಕಾಲ ನಡೆಯಲಿದ್ದು, ಮೇ.17 ರಂದು ವೈರಮುಡಿ ಉತ್ಸವದೊಂದಿಗೆ ಪೂಜಾ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.
ವರದಿ : ಗಿರೀಶ್ ರಾಜ್ ಮಂಡ್ಯ.