ಫ್ಲೋರಿಡಾ: ಪ್ರಸಕ್ತ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಲೀಗ್ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು, ಅಗ್ರಸ್ಥಾನದೊಂದಿಗೆ ಸೂಪರ್-8 ಸುತ್ತಿಗೆ ಪದಾರ್ಪಣೆ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಶುಬ್ಮನ್ ಇನ್ಸ್ಟಾಗ್ರಾಂನಲ್ಲಿ ಅನ್ಫಾಲೋ ಮಾಡಿದ್ದಾರೆ.
ಇದು ಇಬ್ಬರು ಆಟಗಾರರ ನಡುವಿನ ಸಂಭವನೀಯ ಉದ್ವಿಗ್ನತೆಯ ಬಗ್ಗೆ ಊಹಾಪೋಹಗಳನ್ನು ತೀವ್ರಗೊಳಿಸಿದೆ.
ಅತ್ತ ಗಿಲ್ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎನ್ನುವುದರ ನಡುವೆ ಇನ್ಸ್ಟಾದಲ್ಲಿ ಟೀಮ್ ಇಂಡಿಯಾ ನಾಯಕನನ್ನು ಅನ್ಫಾಲೋ ಮಾಡಿರುವುದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಹಿಟ್ಮ್ಯಾನ್ ಹಾಗೂ ಗಿಲ್ ನಡುವೆ ಭಿನ್ನಾಭಿಪ್ರಾಯಗಳಿರುವ ಕುರಿತು ಚರ್ಚೆ ನಡೆಯುತ್ತಿದೆ.
ಗಿಲ್ ಅವರ ವೈಯಕ್ತಿಕ ಉದ್ಯಮಗಳ ಗಮನ ಹರಿಸುವ ಸಲುವಾಗಿ ಅವರು ಭಾರತಕ್ಕೆ ಮರಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಈ ಕುರಿತು ಬಿಸಿಸಿಐ ಕಡೆಯಿಂದ ಅಧಿಕೃತ ಮಾಹಿತಿ ಬಂದಿಲ್ಲ. ಬಿಸಿಸಿಐ ಮೂಲಗಳ ಪ್ರಕಾರ ಗಿಲ್ ಹಾಗೂ ಆವೇಶ್ ಇನ್ನೂ ತಂಡದ ಮೀಸಲು ಆಟಗಾರರ ಭಾಗವಾಗಿದ್ದಾರೆ.
ಶುಭ್ಮನ್ ಗಿಲ್, ರಿಂಕು ಸಿಂಗ್, ಆವೇಶ್ ಖಾನ್ ಮತ್ತು ಖಲೀಲ್ ಅಹ್ಮದ್ ಅವರನ್ನು ಮೀಸಲು ಆಟಗಾರರಾಗಿ ಆಯ್ಕೆ ಮಾಡಲಾಗಿತ್ತು. ನ್ಯೂಯಾರ್ಕ್ ಲೆಗ್ ನಂತರ, ಗಿಲ್ ಮತ್ತು ಆವೇಶ್ ಖಾನ್ ಅವರನ್ನು ತಂಡ ತೊರೆಯಲು ಹೇಳಲಾಗಿದೆ. ಆದರೆ ಖಲೀಲ್ ಅಹ್ಮದ್ ಮತ್ತು ರಿಂಕು ಸಿಂಗ್ ಸ್ಟ್ಯಾಂಡ್ಬೈ ಆಟಗಾರರಾಗಿ ಉಳಿದಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.