ಮುಂಬೈ: ಟೀಂ ಇಂಡಿಯಾದ (Team India) ಆರಂಭಿಕ ಬ್ಯಾಟರ್ ಶುಭಮನ್ ಗಿಲ್ (Shubman Gill), ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 8 ರನ್ ಅಂತರದಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ತಮ್ಮ ಚೊಚ್ಚಲ ಶತಕದಿಂದ ವಂಚಿತರಾದರು. ಇದು ಗಿಲ್ ಅಭಿಮಾನಿಗಳಲ್ಲೂ ನಿರಾಸೆ ಮೂಡಿಸಿತು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಪರ ಶುಭಮನ್ ಗಿಲ್ ಕೊಹ್ಲಿ ಜೊತೆಗೂಡಿ ಭರ್ಜರಿ ಆಟವಾಡಿದರು. 92 ಎಸೆತಗಳಲ್ಲಿ 11 ಫೋರ್ ಮತ್ತು 2 ಸಿಕ್ಸರ್ಗಳೊಂದಿಗೆ ಶತಕದತ್ತ ದಾಪುಗಾಲಿಟ್ಟಿದ್ದ ಗಿಲ್, ಸ್ಲೋ ಬೌನ್ಸರ್ ಎದುರು ಅಪ್ಪರ್ ಕಟ್ ಆಡುವ ಪ್ರಯತ್ನದಲ್ಲಿ 92 ರನ್ಗೆ ವಿಕೆಟ್ ಕೈಚೆಲ್ಲಿದರು.
ಈ ವೇಳೆ ವಾಂಖೆಡೆ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತಿದ್ದ ಶುಭಮನ್ ಗಿಲ್ ಅವರ ಪ್ರೇಯಸಿ ಎಂದೇ ಗುರುತಿಸಿಕೊಂಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಬೇಸರಗೊಂಡರು. ಆದಾಗ್ಯೂ ಟೀಂ ಇಂಡಿಯಾದ ಪ್ರಿನ್ಸ್ ಖ್ಯಾತಿಯ ಆಟಗಾರನಿಗೆ ಸ್ಟ್ಯಾಂಡಿಂಗ್ ಓವೇಷನ್ ಕೊಟ್ಟರು. ಈ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ