ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರ ಪತನ ಆಗೋಕೆ ಸಿದ್ದರಾಮಯ್ಯನವರೇ ಪರೋಕ್ಷವಾಗಿ ಎಂದು ಬರೆದುಕೊಂಡಿದ್ದ ಮಾಜಿ ಸಚಿವ ಸುಧಾಕರ್ ಟ್ವೀಟ್ಗೆ ಚಿಕ್ಕಬಳ್ಳಾಪುರ (Chikkaballapur) ನೂತನ ಕಾಂಗ್ರೆಸ್ (Congress) ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಸುಧಾಕರ್ ಅವರೇ ಬಾಯಿ ಮುಚ್ಚಿಕೊಂಡು ಇರಿ ಎಂದು ಟಾಂಗ್ ನೀಡುವ ಮೂಲಕ ಬಾಯಿ ಮುಚ್ಚಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕು ಮೈಲಪನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ನಿಮ್ಮದೇ ಪಕ್ಷದ ಎಂಟಿಬಿ ನಾಗರಾಜ್ ಅವರೇ ನಿಮ್ಮ ಟ್ವೀಟ್ಗೆ ಕೌಂಟರ್ ಕೊಟ್ಟಿದ್ದಾರೆ ಇದು ಸಾಲದೇ . ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಬೇಡಿ, ಬಾಯಿ ಮುಚ್ಚಿಕೊಂಡು ಇರಿ. ನಮ್ಮ ಪಕ್ಷದ ಆತಂರಿಕ ವಿಚಾರ ನಿಮಗ್ಯಾಕೆ ಬೇಕು? 3 ವರ್ಷದಿಂದ ಕಡಲೆಬೀಜ ತಿಂತಿದ್ರಾ ಎಂದು ಟಾಂಗ್ ಕೊಟ್ಟಿದ್ದಾರೆ.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರಾಜಕೀಯವಾಗಿ ನನ್ನ ತಂದೆ-ತಾಯಿ ಇದ್ದಂತೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಯಾರೇ ಸಿಎಂ ಆದರೂ ಕೂಡ ನನಗೆ ಸಂತೋಷ. ಅವರಿಬ್ಬರು ನನಗೆ ಎರಡು ಕಣ್ಣುಗಳಿದ್ದಂತೆ ಎಂದರು.
ಗ್ರಾಮದ ಮನೆ ಮನೆಗೂ ಭೇಟಿ ನೀಡಿದ ಪ್ರದೀಪ್ ಈಶ್ವರ್:
ಚುನಾವಣಾ ಪ್ರಚಾರದ ವೇಳೆ ಕೊಟ್ಟ ಮಾತಿನಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಪ್ರದೀಪ್ ಈಶ್ವರ್ ಗುರುವಾರ ಮನೆ ಮನೆಗೆ ಭೇಟಿ ನೀಡಿ ಜನರ ಕುಂದುಕೊರತೆ ಸಮಸ್ಯೆಗಳನ್ನು ಆಲಿಸಿದರು. ಚಿಕ್ಕಬಳ್ಳಾಪುರ ನಮಸ್ತೆ ಎಂಬ ವಿನೂತನ ಕಾರ್ಯಕ್ರಮ ರೂಪಿಸಿರುವ ಪ್ರದೀಪ್ ಈಶ್ವರ್, ಬೆಳಿಗ್ಗೆ 6 ಗಂಟೆಗೆ, ಸೂರ್ಯೋದಯಕ್ಕೂ ಮುನ್ನ, ಜನ ನಿದ್ದೆಯಿಂದ ಎಚ್ಚರ ಆಗೋಕು ಮುನ್ನವೇ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ಇದೇ ಗ್ರಾಮದಲ್ಲಿ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಇಬ್ಬರು ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಹ ಶೈಕ್ಷಣಿಕವಾಗಿ ದತ್ತು ಪಡೆದ ಪ್ರದೀಪ್ ಈಶ್ವರ್, ಇಬ್ಬರನ್ನು ಖಾಸಗಿ ಕಾಲೇಜಿಗೆ ತಮ್ಮ ವೈಯಕ್ತಿಕ ಹಣ ಕಟ್ಟಿ ದಾಖಲಾತಿ ಮಾಡಲು ತಮ್ಮ ಆಪ್ತ ಸಿಬ್ಬಂದಿಗೆ ಸೂಚಿಸಿದರು
ಈ ವೇಳೆ ಮಾತನಾಡಿದ ಈಶ್ವರ್, ಜನ ನನ್ನ ಬಳಿ ಬರಬಾರದು. ನಾನೇ ಅವರ ಬಳಿ ಹೋಗಬೇಕು. ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಅನ್ನೋ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಿದ್ದು. ಪ್ರತಿದಿನ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಮನೆ ಮನೆಗೆ ತೆರಳಿ ಜನರ ಕಷ್ಟಗಳನ್ನು ಆಲಿಸುವ ಕೆಲಸ ಮಾಡುವುದಾಗಿ ತಿಳಿಸಿದರು.
ಅಧಿಕಾರಿಗಳ ಜೊತೆ ಮನೆ ಮನೆಗೆ ತೆರಳಿ ಖುದ್ದಾಗಿ ಜನರ ಸಮಸ್ಯೆಗಳನ್ನು ಪ್ರದೀಪ್ ಈಶ್ವರ್ ಆಲಿಸಿದ್ದಾರೆ. ಜನ ಪಿಂಚಣಿ ಸಮಸ್ಯೆ, ಮನೆ ನಿವೇಶನ ಸಮಸ್ಯೆ, ವಿದ್ಯುತ್ ಲೈನ್ ಬದಲಾವಣೆಯ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದಿದ್ದು ಅಧಿಕಾರಿಗಳು ಪರಿಹಾರ ಮಾಡುವಂತೆ ಸೂಚನೆ ನೀಡಿದರು.