ಬೆಂಗಳೂರು: ಮುಡಾ ಪ್ರಕರಣ ಬಗ್ಗೆ ಇಡೀ ದೇಶ ಮಾತನಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಬೆತ್ತಲಾಗಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ಕೊಡ್ತೀವಿ ಅಂತ ಅಧಿಕಾರಕ್ಕೆ ಬಂದು, ಒಂದೇ ವರ್ಷದಲ್ಲಿ ಇಷ್ಟೆಲ್ಲ ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದಿದ್ದಾರೆ. ಸಿಎಂ ಅಧಿಕಾರದಲ್ಲಿರುವಾಗ ಲೋಕಾಯುಕ್ತ ಪ್ರಾಮಾಣಿಕ ತನಿಖೆ ನಡೆಸಲು ಸಾಧ್ಯವೇ?
ಆದ್ದರಿಂದ ಕೂಡಲೇ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಶಾಸಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾಜ್ಯ ಹೈಕೋರ್ಟ್ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶವನ್ನು ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ಬೆನ್ನಲ್ಲೇ ಬುಧವಾರ ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತ ಪೊಲೀಸರಿಂದ ತನಿಖೆಗೆ ಆದೇಶ ನೀಡಿತು. ಈ ಕುರಿತು ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ದಾರೆ.
ಹೈಕೋರ್ಟ್ನಿಂದ ತೀರ್ಪು ಹೊರಬಂದಿದ್ದರೂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲ್ಲ ಅಂದಿದ್ದಾರೆ. ಆರೋಪಗಳು ಬಂದಿದ್ದರೂ ಏಕೆ ರಾಜೀನಾಮೆ ಕೊಡಬೇಕು ಅಂದಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರ ಮೇಲೆ ಆರೋಪ ಕೇಳಿಬಂದಾಗ ಸಿದ್ದರಾಮಯ್ಯ ವಿಪಕ್ಷ ನಾಯಕ ಆಗಿದ್ರು, ಆಗ ಏನು ಹೇಳಿದ್ರು ಅಂತ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ