ಬೆಂಗಳೂರು:ಕಾಂಗ್ರೆಸ್ ಅಭೂತಪೂರ್ವ ಜಯಗಳಿಸಿದ್ದು, ಸರ್ಕಾರ ರಚಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ನೂತನ ಸರ್ಕಾರಕ್ಕೆ ಮುಖ್ಯಮಂತ್ರಿ ಯಾರಾಗಬೇಕೆಂಬ ಚರ್ಚೆ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakuamr) ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಈ ಸಂಬಂಧ ತಡರಾತ್ರಿವರೆಗೂ ಶಾಸಕಾಂಗ ಸಭೆ ನಡೆದಿದ್ದು, ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ಗೆ ಬಿಟ್ಟಿದ್ದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆ ಕೈ ನಾಯಕರು ಇಂದು (ಮೇ.15) ದೆಹಲಿಗೆ ತೆರಳಿದ್ದಾರೆ
ಇದೊಂದಡೆಯಾದರೇ, ಮತ್ತೊಂದಡೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೈಸೂರಿನ ಸಿದ್ದರಾಮಯ್ಯ ಬೆಂಬಲಿಗನೋರ್ವ “ಸಿದ್ದರಾಮಯ್ಯ ಸಿಎಂ” ಎಂದು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಸಿದ್ದರಾಮಯ್ಯ ನಿವಾಸದ ಬಳಿ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತ ಘೋಷಣೆ ಕೂಗಿದ್ದಾರೆ. ಅಲ್ಲದೇ ನಿವಾಸದ ಸುತ್ತಮುತ್ತ “ಮುಂದಿನ ಸಿಎಂ ಸಿದ್ದರಾಮಯ್ಯ” ಎಂದು ಬ್ಯಾನರ್ ಹಾಕಿದ್ದಾರೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ 2ನೇ ಬಾರಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು ಎಂದು ಪೋಸ್ಟರ್ ಹಾಕಿದ್ದಾರೆ. ಈ ಹಿನ್ನೆಲೆ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.