ಬೆಂಗಳೂರು:- ಕೇರಳ ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಿಟಿ ರವಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ವಯನಾಡು ಕಳಕಳಿ ಗುಲಾಮಗಿರಿಯ ಸಂಕೇತವೆಂದು ಟೀಕಿಸಿದ್ದಾರೆ.
ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವ ಭರವಸೆ ರಾಜ್ಯ ಸರ್ಕಾರ ನೀಡಿದೆ.
ಮಾನವೀಯ ನೆಲೆಯಲ್ಲಿ ಮಾಡುವುದೇನೋ ಸರಿ. ಆದರೆ, ಸಿದ್ದರಾಮಯ್ಯ ಅವರ ಈ ನಡೆ ಮಾನವೀಯ ನೆಲೆಯಿಂದ ಕಾಣುತ್ತಿಲ್ಲ. ಇದು ಗುಲಾಮಗಿರಿಯ ಸಂಕೇತ.
ಹಿಂದೆ ರಾಹುಲ್ ಗಾಂಧಿ, ಈಗ ಪ್ರಿಯಾಂಕಾ ಗಾಂಧಿ ಅಲ್ಲಿ ಸಂಸದರಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಇಲ್ಲಿ ಬಾಣಂತಿಯರ ಸಾವು, ಎತ್ತಿನಹೊಳೆ ಯೋಜನೆ ಸಂಬಂಧ ಅಧಿಕಾರಿ ಜೊತೆ ಜಗಳ ಮಾಡಿ ರೈತರೊಬ್ಬರು ಹೊಳೆಗೆ ಹಾರಿ ಸಾವನ್ನಪ್ಪಿದ್ದಾರೆ. ಇದರ ಕುರಿತು ರಾಜ್ಯ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಸಿಟಿ ರವಿ ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯರನ್ನು ಉದ್ದೇಶಿಸಿ ವಾಗ್ದಾಳಿ ನಡೆಸಿದ ಸಿಟಿ ರವಿ, ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ನಿಮಗೆ ಕಾಳಜಿ ಇಲ್ಲ. ನಿಮ್ಮ ವಯನಾಡು ಕಳಕಳಿ ಗುಲಾಮಗಿರಿಯ ಸಂಕೇತ. ಈ ಪ್ರಶ್ನೆಯನ್ನು ವಿಧಾನಸಭೆಯಲ್ಲೂ ಮಾಡುತ್ತೇವೆ. ಬಾಣಂತಿಯರ ಸಾವು, ಹಸುಗೂಸುಗಳ ಸಾವು ಪ್ರಕರಣ ಸಂಬಂಧ ಎಸ್ಐಟಿ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮುರುಡೇಶ್ವರದಲ್ಲಿ ಶಾಲಾ ಮಕ್ಕಳು ನೀರು ಪಾಲಾದ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರದ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಆದರೆ, ಈ ಘಟನೆ ಆಗಬಾರದಿತ್ತು. ಮಕ್ಕಳನ್ನು ನೀರಿಗೆ ಬಿಟ್ಟವರು ಯಾರು? ಶಾಲಾ ಮಕ್ಕಳು ಎಂದು ಹೇಳಲಾಗುತ್ತಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಆಗಬೇಕು ಎಂದು ರವಿ ಆಗ್ರಹಿಸಿದರು.