ಮೈಸೂರು: ಇಲ್ಲಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ (Chamundeshwari Constituency) ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವೇದಿಕೆಯಲ್ಲಿ ನಂದಿನಿ ವೆನಿಲ್ಲಾ ಫ್ಲೇವರ್ ಹಾಲು ಕುಡಿದು `ನಂದಿನಿ’ ಉತ್ಪನ್ನಕ್ಕೆ (Nandini Products) ಬೆಂಬಲ ಸೂಚಿಸಿದ್ದಾರೆ.
ಮೈಸೂರು (Mysuru) ಹೊರವಲಯದ ಕೇರ್ಗಳ್ಳಿ ಗ್ರಾಮದ ಖಾಸಗಿ ಭವನದಲ್ಲಿ ಸಭೆ ನಡೆಯುವಾಗ ಆಪ್ತರೊಂದಿಗೆ ವೇದಿಕೆಯಲ್ಲಿ ಕುಳಿತಿದ್ದ ಸಿದ್ದರಾಮಯ್ಯ ನಂದಿನಿ ವೆನಿಲ್ಲಾ ಫ್ಲೇವರ್ ಬಾಟಲಿ ಹಾಲು ಕುಡಿದು, ಬಳಿಕ ಬಾಟಲಿ ತೋರಿಸಿ `ನಂದಿನಿ’ ಉತ್ಪನ್ನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ನಂತರ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಮುಖಂಡರನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಎಲ್ಲರ ಅಭಿಪ್ರಾಯಪಡೆದು, ಎದುರಾಳಿಯನ್ನು ಎದುರಿಸುವ ಶಕ್ತಿ ಇರುವ ಅಭ್ಯರ್ಥಿಗೆ ಟಿಕೆಟ್ ನೀಡಿದ್ದೇವೆ. ಪಕ್ಷದಲ್ಲಿ ಎಲ್ಲರೂ ಸಮರ್ಥರಿದ್ದಾರೆ, ಆದ್ರೆ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ. ಆ ಕಾರಣಕ್ಕೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದೇಗೌಡರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು.
ಈಬಾರಿ ಚುನಾವಣೆಯನ್ನ ಪ್ರತಿಯೊಬ್ಬರು ಗಂಭೀರವಾಗಿ ತೆಗೆದುಕೊಳ್ಳಬೇಕು. ಕಳೆದಬಾರಿ ಜಿ.ಟಿ ದೇವೇಗೌಡ (GT Devegowda) ಅವರು ನನ್ನನ್ನ ಸೋಲಿಸಿದ್ರು. ನನ್ನನ್ನ ಸೋಲಿಸಿ ಬಹಳ ಒಳ್ಳಯ ಕೆಲಸ ಮಾಡಿದ್ರು, ಏಕೆಂದರೆ ಬಿಜೆಪಿ ಮಾತ್ರ ಅಧಿಕಾರಕ್ಕೆ ಬರಬಾರದು. ಅವರು ಮನುಷ್ಯ-ಮನುಷ್ಯರ ನಡುವೆ ಎತ್ತಿಕಟ್ತಾರೆ, ದೇಶದಲ್ಲಿ ಅಶಾಂತಿ ಉಂಟಾಗುತ್ತೆ, ಆ ಕಾರಣಕ್ಕೆ ಬಿಜೆಪಿ ಮಾತ್ರ ಅಧಿಕಾರಕ್ಕೆ ಬರಬಾರದು ಎಂದು ಗುಡುಗಿದರು.
ಯಾರಾದ್ರೂ ರಕ್ತಕೊಡಿ ಎಂದು ಕೇಳುವಾಗ ಜಾತಿ ನೋಡಲ್ಲ, ಮುಸ್ಲಿಂ ಆದರೂ ಸರಿ ಕೊಡಿ ಅಂತೀವಿ. ಆದ್ರೆ ಬಿಜೆಪಿಯವರು ಭೇದ ಭಾವ ಮಾಡೋದ್ರಲ್ಲಿ ಮುಂಚೂಣಿಯಲ್ಲಿದ್ದಾರೆ. ಆ ಕಾರಣಕ್ಕೆ ನಾವು ಕಳೆದಬಾರಿ ಜೆಡಿಎಸ್ಗೆ ಅಧಿಕಾರ ನೀಡಿದ್ದೆವು. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಸಿಎಂ ಆದ್ರು, ಜಿ.ಟಿ ದೇವೇಗೌಡ ಶಿಕ್ಷಣ ಸಚಿವರಾದರು. ಅವರಿಬ್ಬರ ನಡುವೆ ಹೊಂದಾಣಿಕೆ ಇಲ್ಲದಿದ್ದಾಗ ನನ್ನ ಬಳಿ ಬಂದು, ಕಾಂಗ್ರೆಸ್ಗೆ ಬರ್ತೀನಿ ಅಂದಿದ್ರು. ಅವನೇ ಬಂದ, ಅವನೇ ಹೋದ, ಈವಾಗ ಜೆಡಿಎಸ್ ನಿಂದ ಅರ್ಜಿ ಹಾಕಿದ್ದಾನೆ. ಕುಮಾರಸ್ವಾಮಿ ಎಷ್ಟೇ `ಪಂಚರತ್ನ ಯಾತ್ರೆ’ ಮಾಡಿದ್ರೂ ಅಧಿಕಾರಕ್ಕೆ ಬರಲ್ಲ, ಇನ್ನೊಬ್ಬರ ಹೆಗಲಮೇಲೆ ಕುಳಿತೇ ಅಧಿಕಾರ ಮಾಡಬೇಕು ಎಂದು ಕುಟುಕಿದ್ದಾರೆ