ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರ ಸ್ಪರ್ಧೆ ಇನ್ನೂ ಕಗ್ಗಂಟಾಗಿದೆ. ಎರಡನೇ ಪಟ್ಟಿಯಲ್ಲಿ ಸಿದ್ದರಾಮಯ್ಯ ಹೆಸರು ಘೋಷಣೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಎರಡನೇ ಪಟ್ಟಿಯಲ್ಲಿ ಸಿದ್ದರಾಮಯ್ಯ ಹೆಸರು ಘೋಷಣೆ ಮಾಡಿಲ್ಲ. ಜೊತೆಗೆ ಕೋಲಾರಕ್ಕೆ ಬೇರೆ ಅಭ್ಯರ್ಥಿ ಹೆಸರೂ ಘೋಷಣೆ ಮಾಡಿಲ್ಲ.
ಕೋಲಾರದಲ್ಲಿ ಸ್ಪರ್ಧೆ ಇಂಗಿತವನ್ನು ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಹೈಕಮಾಂಡ್ ಸೂಚನೆಯಂತೆ ವರುಣಾದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಕೋಲಾರ ಕಣ ಸಿದ್ದರಾಮಯ್ಯಗೆ ಅಷ್ಟೊಂದು ಸುಲಭವಲ್ಲ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದರು ಎನ್ನಲಾಗುತ್ತಿದೆ. ಆದರೆ ಇದೀಗ ವರುಣಾದ ಜೊತೆಗೆ ಕೋಲಾರದಲ್ಲೂ ಸ್ಪರ್ಧೆ ಮಾಡಲು ಮುಂದಾಗುತ್ತಿದ್ದಾರೆ. ಆದರೆ ಇದಕ್ಕೆ ಇನ್ನೂ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿಲ್ಲ.
ಎರಡು ಕ್ಷೇತ್ರ ಆಯ್ಕೆಗೆ ಅಪಸ್ವರ!
ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡಬೇಕು ಎಂದು ಅವರ ಅಭಿಮಾನಿಗಳು ಒತ್ತಾಯ ಮಾಡಿದ್ದರು. ಸಿದ್ದರಾಮಯ್ಯ ನಿವಾಸದಲ್ಲಿ ಧರಣಿಯನ್ನು ನಡೆಸಿದ್ದರು. ಸಿದ್ದರಾಮಯ್ಯ ಆಪ್ತರು ಕೂಡಾ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಚಾಮುಂಡೇಶ್ವರಿ ಜೊತೆಗೆ ಬಾದಾಮಿಯಲ್ಲೂ ಸ್ಪರ್ಧೆ ಮಾಡಿದ್ದರು. ಆದರೆ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ಇಲ್ಲ ಎಂದು ಆರಂಭದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದರು.
ಹಾಗಿದ್ದರೂ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧೆಯ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಪಕ್ಷದಲ್ಲಿ ಇದಕ್ಕೆ ಅಪಸ್ವರ ಇದೆ ಎಂಬ ಮಾಹಿತಿಯೂ ಇದೆ. ಪರಿಣಾಮ ಎರಡನೇ ಪಟ್ಟಿಯಲ್ಲಿ ಸಿದ್ದರಾಮಯ್ಯ ಹೆಸರು ಕಾಣಿಸಿಕೊಂಡಿಲ್ಲ. ಇನ್ನು ಮೂರನೇ ಪಟ್ಟಿ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸಿಇಸಿ ಸಭೆ ನಡೆಯುತ್ತಿದ್ದು, ಮೂರನೇ ಪಟ್ಟಿಯಲ್ಲಿ ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಅಂತಿಮಗೊಳ್ಳುತ್ತಾ ? ಎಂಬ ಕುತೂಹಲ ಇದೆ.
ಕೋಲಾರ ಸ್ಪರ್ಧೆಯ ಬಗ್ಗೆ ನಿರ್ಧಾರವನ್ನು ಹೈಕಮಾಂಡ್ ಗೆ ಬಿಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ. ಆದ್ರೆ ಹೈಕಮಾಂಡ್ ಏನು ನಿಲುವು ಕೈಗೊಳ್ಳಲಿದೆ ಎಂಬುದು ಕೂಡಾ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಟಿಕೆಟ್ ನೀಡಿಲ್ಲ ಎಂದಾದಲ್ಲಿ ಸಿದ್ದರಾಮಯ್ಯ ಅವರಿಗೆ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.