ಮಣಿಪಾಲ: ಕೃಷ್ಣನ ಶಾಪದಿಂದಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಅವರಿಗೆ ಒಳ್ಳೆದಾಗಲಿ ಅನ್ನೋ ಉದ್ದೇಶದಿಂದ ಹೇಳುತ್ತಿದ್ದೇನೆ. ಕೃಷ್ಣಮಠಕ್ಕೆ ಬಂದು ಅವರ ಪಾಪ ಕಳೆದುಕೊಳ್ಳಲಿ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದರು
ಉಡುಪಿಯ ಮಣಿಪಾಲದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಬಹಳ ಸಲ ಉಡುಪಿಗೆ ಬಂದರಿದ್ದರು. ಆದರೆ ಒಮ್ಮೆಯೂ ಕೃಷ್ಣಮಠಕ್ಕೆ ಅವರು ಭೇಟಿ ಕೊಟ್ಟಿಲ್ಲ. ಭಕ್ತ ಕನಕದಾಸರ ಪುತ್ಥಳಿ ಕೃಷ್ಣ ಮಠದಲ್ಲಿದೆ. ಕನಕನಿಗೂ ಕೃಷ್ಣನಿಗೆ ವಿಶೇಷವಾದ ಸಂಬಂಧ ಇದೆ.ಕೃಷ್ಣನ ಸ್ಪೂರ್ತಿ ಕನಕನಿಗೆ ಸಿಕ್ಕಿತು.ಇಂತಹ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಭೇಟಿ ಕೊಟ್ಟಿಲ್ಲ? ಕೃಷ್ಣನ ಶಾಪದಿಂದಲೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರಿ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕಿಡಿಕಾರಿದರು.
ಕೃಷ್ಣಮಠಕ್ಕೆ ಬಂದು ನಿಮ್ಮ ಪಾಪ ಕಳೆದುಕೊಳ್ಳಿ
ಈಗಲಾದರೂ ಕೃಷ್ಣ ಮಠಕ್ಕೆ ಬನ್ನಿ, ನಿಮಗೆ ಒಳ್ಳೆಯದಾಗುತ್ತೆ. ನಿಮಗೆ ಒಳ್ಳೆದಾಗಲಿ ಅನ್ನೋ ಉದ್ದೇಶದಿಂದ ಹೇಳುತ್ತಿದ್ದೇನೆ. ಕೃಷ್ಣಮಠಕ್ಕೆ ಬಂದು ನಿಮ್ಮ ಪಾಪ ಕಳೆದುಕೊಳ್ಳಿ ಎಂದು ಸಿದ್ದರಾಮಯ್ಯ ಅವರ ಕಾಲೆಳೆದರು. ಸಿದ್ದರಾಮಯ್ಯ ಮೇಲೆ ಪ್ರೀತಿಯಿಂದಲೇ ಈ ಮಾತು ಹೇಳುತ್ತಿದ್ದೇನೆ. ರಾಜಕೀಯ ಉದ್ದೇಶದಿಂದ ಈ ರೀತಿ ಹೇಳಿಲ್ಲ ಎಂದರು.
ಕಾಂಗ್ರೆಸ್ ದೇಶದಲ್ಲಿ ನಿರ್ನಾಮ ಆಗಿದೆ
ಅಪ ಪ್ರಚಾರ ಮಾಡಿ ಮಾಡಿ ಕಾಂಗ್ರೆಸ್ ದೇಶದಲ್ಲಿ ನಿರ್ನಾಮ ಅಗಿದೆ. ಕರ್ನಾಟಕ ದಲ್ಲಿ ಮಾತ್ರ ಕಾಂಗ್ರೆಸ್ ಕುಟು ಕುಟು ಅಂತಾಯಿದೆ. ಈ ಚುನಾವಣೆಯಲ್ಲಿ ಸಂಪೂರ್ಣ ಜೀವ ಹೋಗುತ್ತದೆ. ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬರೋರಿಗೆ 500 ರೂಪಾಯಿ ಕೊಟ್ಟು ಕರ್ಕೊಂಡು ಬರೋ ಅಂತಹ ಪರಿಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದ್ದರು.
ಅಲ್ಲಾ ಬಗ್ಗೆ ಹೇಳಿಕೆ ನೀಡಿದ್ದ ಈಶ್ವರಪ್ಪ
ಮೈಕ್ ಜೋರಾಗಿ ಹಾಕಿ ಆಝಾನ್ ಕೂಗುವುಕ್ಕೆ ಮಾಜಿ ಸಚಿವ ಈಶ್ವರಪ್ಪ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲಾನಿಗೆ ಕಿವುಡಾ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಬಳಿಕ ಮಕ್ಕಳ ಪರೀಕ್ಷೆ ನಡೆಯುತ್ತಿದ್ದು, ಜೋರಾಗಿ ಮೈಕ್ ಹಾಕುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ ಎಂದು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನವನ್ನು ಈಶ್ವರಪ್ಪ ಮಾಡಿದ್ದರು