ಬೆಂಗಳೂರು: ಕಿಚ್ಚ ಸುದೀಪ್ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ಮಾಡಿದರು. ನಾನಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಸುದೀಪ್, ವರುಣಾ ಕ್ಷೇತ್ರಕ್ಕೆ ಹೋಗಿರಲಿಲ್ಲ. ಈ ಕುರಿತು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯನವರ ಮೇಲೆ ಆರೋಪ ಮಾಡಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ಗೆಲ್ಲುವುದಕ್ಕಾಗಿ ನಾನಾ ರೀತಿಯ ಹೊಂದಾಣಿಕೆಗಳನ್ನು ಮಾಡಿಕೊಂಡರು. ತಮ್ಮ ಬಗ್ಗೆ ತೀಕ್ಷ್ಮವಾಗಿ ಪ್ರತಿಕ್ರಿಯೆ ಬಾರದಂತೆ ನೋಡಿಕೊಂಡರು. ಸುದೀಪ್ ಅವರು ವರುಣಾ ಕ್ಷೇತ್ರದ ಪ್ರಚಾರಕ್ಕೆ ಬಾರದಂತೆ ತಡೆಹಿಡಿದರು ಎಂದು ಸಿಂಹ ಆರೋಪಿಸಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸುದೀಪ್ ಬಿಜೆಪಿಗೆ ಬೆಂಬಲಿಸಿದ್ದಕ್ಕಾಗಿ ಅನೇಕರು ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಬಿಜೆಪಿ ಪಕ್ಷದಲ್ಲಿತ್ತು. ಸುದೀಪ್ ಪತ್ರಿಕಾಗೋಷ್ಠಿ ಮಾಡಿ, ತಾವು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದರು. ಜಾತಿ ಲೆಕ್ಕಾಚಾರವನ್ನು ಗಣನೆಗೆ ತಗೆದುಕೊಂಡು ಸುದೀಪ್ ಅವರನ್ನು ಕೆಲ ಕ್ಷೇತ್ರಗಳಿಗೆ ಮಾತ್ರ ಪ್ರಚಾರಕ್ಕೆ ಕಳುಹಿಸಲಾಗಿತ್ತು.