ಬೆಂಗಳೂರು: ಕ್ರಿಕೆಟ್ ನನ್ನ ಇಷ್ಟದ ಆಟ, ಆರ್ಸಿಬಿ (RCB) ನನ್ನ ಹೆಮ್ಮೆಯ ತಂಡ. ಇಂದಲ್ಲ ನಾಳೆ ಕಪ್ ನಮ್ಮವರೂ ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ದಿನಾಂಕ ಘೋಷಣೆಯಾಗಿದ್ದು, ಒಂದೆಡೆ ರಾಜಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಒತ್ತಡದ ನಡುವೆಯೂ ಭಾನುವಾರ ಐಪಿಎಲ್ ಮ್ಯಾಚ್ ವೀಕ್ಷಿಸಿ ಕಾಲ ಕಳೆದಿದ್ದಾರೆ.
Siddu IPL Craze; ಚುನಾವಣೆ ಬ್ಯುಸಿ ನಡುವೆಯೂ ಸಿದ್ದು ಎಂಜಾಯ್ ಮೆಂಟ್: ಮೊಮ್ಮಗನ ಜೊತೆ IPL ಕ್ರಿಕೆಟ್ ವೀಕ್ಷಣೆ
16ನೇ ಆವೃತ್ತಿಯ ಐಪಿಎಲ್ ಆರಂಭಗೊಂಡಿದ್ದು, ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ (Mumbai Indians) ನಡುವೆ ಕಾದಾಟ ನಡೆದಿತ್ತು. ಕ್ರೀಡಾಂಗಣದ ತುಂಬಾ ಲಕ್ಷಾಂತರ ಅಭಿಮಾನಿಗಳು ನೆರೆದಿದ್ದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಆಪ್ತರೊಂದಿಗೆ ತೆರಳಿ ಪಂದ್ಯ ವೀಕ್ಷಣೆ ಮಾಡಿದ್ದಾರೆ.
ಪಂದ್ಯ ವೀಕ್ಷಣೆಯ ನಂತರ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿರುವ ಅವರು, ಕ್ರಿಕೆಟ್ ನನ್ನ ಇಷ್ಟದ ಆಟ, ಆರ್ಸಿಬಿ ನನ್ನ ಹೆಮ್ಮೆಯ ತಂಡ. ನನ್ನಂತಹ ಕೋಟ್ಯಂತರ ಅಭಿಮಾನಿಗಳ ಹಾರೈಕೆ ಆರ್ಸಿಬಿ ಹುಡುಗರ ಜೊತೆಗಿದೆ. ಇಂದಲ್ಲ ನಾಳೆ ನಮ್ಮವರೂ ಕಪ್ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಓರ್ವ ಕನ್ನಡಿಗನಾಗಿ ನನ್ನ ಬೆಂಬಲ ಯಾವಾಗಲೂ ನಮ್ಮ ಆರ್ಸಿಬಿಗೆ ಎಂದು ಬರೆದುಕೊಂಡಿದ್ದಾರೆ.
ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. 172 ರನ್ಗಳ ಗುರಿ ಬೆನ್ನತ್ತಿದ್ದ ಆರ್ಸಿಬಿ 16.2 ಓವರ್ಗಳಲ್ಲೇ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಭರ್ಜರಿ ಜಯ ಸಾಧಿಸಿತು.