ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಕೋಲಾರ ಸ್ಪರ್ಧೆಯಿಂದ ಬಹುತೇಕ ಹಿಂದೆ ಸರಿದಿದ್ದಾರೆ. ಕೋಲಾರದಲ್ಲಿ ಸ್ಪರ್ಧೆ ಕುರಿತಾಗಿ ಹೈಕಮಾಂಡ್ ಸೂಚನೆಯ ಹಿನ್ನೆಲೆಯಲ್ಲಿ ದೆಹಲಿಯಿಂದ ವಾಪಸ್ ಆದ ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆಗೆ ಮಾತುಕತೆ ನಡೆಸಿದರು. ಸದ್ಯ ಅಧಿಕೃತವಾಗಿ ಕೋಲಾರದಿಂದ ಸ್ಪರ್ಧೆ ಮಾಡಲ್ಲ ಎಂದು ಘೋಷಣೆ ಮಾಡದೆ ಇದ್ದರೂ, ವರುಣವನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯ ಈ ಬಾರಿ ಬೆಂಗಳೂರಿಗೆ ಹತ್ತಿರವಾಗಿರುವ ಕ್ಷೇತ್ರದ ಹುಡುಕಾಟದಲ್ಲಿದ್ದರು. ಆರಂಭದಲ್ಲಿ ಅವರು ವರುಣಾದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂಬ ಮಾತಿತ್ತು. ಆದರೆ, ದಿಢೀರಾಗಿ ಕೋಲಾರದ ಕಡೆ ಮುಖ ಮಾಡಿದರು. ಕೋಲಾರದಲ್ಲಿ ತಾನು ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದರೂ ಅಂತಿಮ ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದರು.
ಈ ನಡುವೆ ಕೋಲಾರದಲ್ಲಿ ನಿರಂತರ ಪ್ರವಾಸವನ್ನೂ ಕೈಗೊಂಡಿದ್ದರು. ಸ್ಥಳೀಯ ನಾಯಕರ ಮುನಿಸನ್ನು ಸರಿಪಡಿಸುವ ನಿಟ್ಟಿನಲ್ಲೂ ಸಾಕಷ್ಟು ಪ್ರಯತ್ನ ನಡೆಸಿದ್ದರು. ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಮುಂದಾದ ಬೆನ್ನಲ್ಲೇ ಸ್ಥಳೀಯ ನಾಯಕರ ಭಿನ್ನಾಭಿಪ್ರಾಯ ಬಹಿರಂಗಗೊಂಡಿತ್ತು. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣ ರಾಜಕೀಯ ಸಿದ್ದರಾಮಯ್ಯ ತಲೆಕೆಡಿಸಿತ್ತು.
ಹಾಗಿದ್ದರೂ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು. ಕೆ.ಎಚ್.ಮುನಿಯಪ್ಪ ಜೊತೆಗೆ ಎರಡು ಮೂರು ಸುತ್ತಿನ ಮಾತುಕತೆಯನ್ನು ನಡೆಸಿದ್ದರು. ಈ ನಡುವೆ ಕ್ಷೇತ್ರದಲ್ಲಿ ವಾರ್ ರೂಂ ಕೂಡಾ ತೆರೆದಿದ್ದರು. ಜೊತೆಗೆ ಮನೆಯ ಹುಟುಕಾಟವನ್ನೂ ನಡೆಸಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಅವರ ಕೋಲಾರ ಸ್ಪರ್ಧೆ ಬಹುತೇಕ ಖಚಿತವಾಗಿತ್ತು.
ಆದರೆ ಶುಕ್ರವಾರ ದೆಹಲಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯ ಬಳಿಕ ಎಲ್ಲವೂ ಬದಲಾವಣೆ ಆಗಿದೆ. ಕೋಲಾರದಲ್ಲಿ ಸ್ಪರ್ಧೆ ಕಠಿಣ ಎಂಬ ಸಮೀಕ್ಷಾ ವರದಿ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ. ಕೋಲಾರಕ್ಕಿಂತ ವರುಣಾವನ್ನು ಆಯ್ಕೆ ಮಾಡಿಕೊಳ್ಳಿ ಎಂಬ ಸೂಚನೆ ಹೈಕಮಾಂಡ್ ನೀಡಿದೆ ಎಂಬುವುದು ಒಂದು ವಾದವಾಗಿದೆ.
ಕೋಲಾರದ ಸ್ಪರ್ಧೆ ಕಠಿಣ ಎಂಬ ಸುಳಿವು ಸಿದ್ದರಾಮಯ್ಯಗೆ ಸಿಕ್ಕಿತ್ತೇ?
ಈ ನಡುವೆ ಮತ್ತೊಂದು ಅಭಿಪ್ರಾಯವೂ ಕೇಳಿಬರುತ್ತಿದೆ. ಅದೇನೆಂದರೆ ಕೋಲಾರದಲ್ಲಿ ಸಿದ್ಧರಾಮಯ್ಯ ಸ್ಪರ್ಧೆ ಸುಲಭವಲ್ಲ ಎಂಬುವುದು. ಸ್ಥಳೀಯ ನಾಯಕರ ಭಿನ್ನಾಭಿಪ್ರಾಯ ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಜೆಡಿಎಸ್, ಬಿಜೆಪಿ ಜೊತೆಗೆ ಒಳಏಟಿನ ಆತಂಕವೂ ಸಿದ್ದರಾಮಯ್ಯ ಅವರನ್ನು ಕಾಡಿತ್ತು ಎಂಬ ಮಾಹಿತಿಯೂ ಇದೆ.
ಪರಿಣಾಮಗಳೇನು?
ಸಿದ್ದರಾಮಯ್ಯ ಕೋಲಾರದ ಸ್ಪರ್ಧೆ ನಡೆಸದೆ ಇದ್ದಲ್ಲಿ ಅದು ರಾಜಕೀಯವಾಗಿಯೂ ಕೆಲವೊಂದು ಪರಿಣಾಮವನ್ನು ಬೀರುವ ಸಾಧ್ಯತೆ ಇದೆ. ಬಿಜೆಪಿಗೆ ಇದೊಂದು ರಾಜಕೀಯ ಅಸ್ತ್ರವಾಗಲಿದೆ. ಸಿದ್ದರಾಮಯ್ಯ ಕ್ಷೇತ್ರ ಹುಟುಕಾಟದ ಬಗ್ಗೆ ವ್ಯಂಗ್ಯವಾಡುತ್ತಿದ್ದ ಬಿಜೆಪಿಗೆ ಇದೀಗ ಸಿದ್ದರಾಮಯ್ಯ ವಿರುದ್ಧ ಮಗದೊಂದು ಅಸ್ತ್ರ ಸಿಕ್ಕಿದೆ. ಇದನ್ನು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧವಾಗಿ ಪ್ರಯೋಗ ಮಾಡುವ ಮೂಲಕ ಅಭಿಪ್ರಾಯ ರೂಪಿಸಲು ಬಿಜೆಪಿ ಪ್ರಯತ್ನ ಪಡಲಿದೆ. ಆದರೆ ಇವೆಲ್ಲವನ್ನೂ ಹೇಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಿಭಾಯಿಸಲಿದೆ ಎಂಬುವುದು ಸದ್ಯದ ಕುತೂಹಲ.