ಬೆಂಗಳೂರು: ಕಂಡವರ ಮಕ್ಕಳನ್ನು ಬೆಳೆಸಿದ ದೇವರಾಜ್ ಅರಸ್ ದೇವರಾದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಯಡಿಯೂರಪ್ಪನವರು, ಮಲ್ಲಿಕಾರ್ಜುನ್ ಖರ್ಗೆ, ಕೇಂದ್ರ ಸಚಿವ ಕುಮಾರಣ್ಣ ಎಲ್ಲರಿಗೂ ತಮ್ಮ ಮಕ್ಕಳದ್ದೇ ಚಿಂತೆಯಾದರೆ ಕಂಡವರ ಮಕ್ಕಳನ್ನು ಬೆಳೆಸುವವರಾರು? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಕೇಳಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಪ್ರತಾಪ್ ಸಿಂಹ ಅವರು, ಸಿಎಂ ಸಿದ್ದರಾಮಯ್ಯ, ಹೆಚ್.ಡಿ ದೇವೇಗೌಡರು, ಹೆಚ್.ಸಿ ಮಹಾದೇವಪ್ಪ, ಯಡಿಯೂರಪ್ಪ ಸಾಹೇಬರು ನೆಲದಿಂದ ಬೆಳೆದು ಬಂದವರು. ಹಾಗಾಗಿ ಅವರು ನಾಯಕರು. ಇವರು ಮುಂದಿನ ಜನರೇಷನ್ಗೆ ಏನು ಕೊಟ್ಟರು ಅನ್ನೋದು ಪ್ರಶ್ನೆ. ದೇವರಾಜ್ ಅರಸ್ ಕಂಡವರ ಮಕ್ಕಳನ್ನು ಬೆಳೆಸಿ ದೇವರಾದರು. ಆದರೆ, ಬೇರೆಯವರಿಗೆ ತಮ್ಮ ಮಕ್ಕಳನ್ನು ಬೆಳೆಸುವ ಚಿಂತೆ ಎಂದರು.
ಯಡಿಯೂರಪ್ಪ ವಿರುದ್ಧವೂ ಆಕ್ರೋಶ
ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದೇ ಕಥೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ನಲ್ಲಿ ಮಂತ್ರಿಗಳ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ. ಇದಕ್ಕೆ ಬಿಜೆಪಿ ಕೂಡ ಹೊರತಾಗಿಲ್ಲ. ನಮ್ಮ ಪಕ್ಷದಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಸಾಹೇಬರಿಂದ ಹಿಡಿದು ಬೇರೆಯವರ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ ಎಂದು ಆಕ್ರೋಶ ಹೊರಹಾಕಿದ್ರು.