ಬೆಂಗಳೂರು : ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ , ಈಗ ಚರ್ಚೆ ಮಾಡಿ ಏನು ಪ್ರಯೋಜನ? ಎಂದು ಸಂಸದ ಡಿ.ಕೆ ಸುರೇಶ್ ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ನಾಯಕರು ಸಿದ್ದರಾಮಯ್ಯ, ಅದರಲ್ಲಿ ಸಂದೇಹ ಬೇಡ ಎಂದರು. ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆಯಲ್ಲಿ ಮಾತನಾಡಿ, ಆಡಳಿತ ನಡೆಸಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ಗೆ ಗುರಿ ಇದೆ. ಕಾಂಗ್ರೆಸ್ ಸರ್ಕಾರ ಸುಭದ್ರವಾಗಿರಬೇಕೆನ್ನುವುದು ಇಬ್ಬರ ಗುರಿ. ಸಿಎಂ ಹುದ್ದೆ ಖಾಲಿ ಇಲ್ಲ, ಖಾಲಿ ಇದ್ದಾಗ ಚರ್ಚೆ ಮಾಡಿದ್ರೆ ಅರ್ಥ ಇರುತ್ತೆ ಎಂದರು.
ಮುಂದಿನ ಸಿಎಂ ಬಗ್ಗೆ ಕೆಲವರ ಅಭಿಪ್ರಾಯ ಇರುತ್ತದೆ. ಆದರೆ ಏನೇ ತೀರ್ಮಾನ ಮಾಡಬೇಕಾದರೂ ಎಐಸಿಸಿ ಅಧ್ಯಕ್ಷರು, ಹೈಕಮಾಂಡ್ ನಾಯಕರು ಮಾಡುತ್ತಾರೆ. ಈಗ ನಮ್ಮ ನಾಯಕರು ಸಿಎಂ ಸಿದ್ದರಾಮಯ್ಯ. ಇದರಲ್ಲಿ ಯಾವುದೇ ಅನುಮಾನ, ಸಂದೇಹ ಬೇಡ ಎಂದರು. ಕಲೆಕ್ಷನ್ ಸರ್ಕಾರ ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ,ಬಿಜೆಪಿಯ 40 ಪರ್ಸೆಂಟ್ ಹಣ ಎಲ್ಲಾ ಕಡೆ ಚೆಲ್ಲಾಡ್ತಿದೆ. ಯಡಿಯೂರಪ್ಪರ ಬಗ್ಗೆ ಗೌರವ ಇದೆ ಹಾಗಾಗಿ ಮಾತನಾಡಲ್ಲ ಎಂದರು.