ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ತೂಗುದೀಪ ಜೈಲು ಸೇರಿದ್ದಾರೆ. ಈ ವೇಳೆ ದರ್ಶನ್ ರನ್ನು ಭೇಟಿಯಾಗಲು ಸಾಕಷ್ಟು ಸೆಲೆಬ್ರಿಟಿಗಳು ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದರು. ಆದರೆ ಎಲ್ಲರಿಗೂ ದರ್ಶನ್ ಭೇಟಿ ಸಾಧ್ಯವಾಗಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿಯೂ ಸಹ ವಿಶೇಷ ಸೆಲ್ನಲ್ಲಿರುವ ದರ್ಶನ್ಗೆ ಯಾರನ್ನೂ ಭೇಟಿ ಆಗುವ ಅವಕಾಶವಿಲ್ಲ. ಆದರೆ ಸಿದ್ಧಾರೂಢ ಎಂಬ ಮಾಜಿ ಕೈದಿ ತಾವು ದರ್ಶನ್ ಅನ್ನು ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದ. ಇದೀ ಆತನಿಗೆ ಪೊಲೀಸ್ ಇಲಾಖೆ ನೋಟೀಸ್ ನೀಡಿದೆ.
ಖಾಸಗಿ ಯೂಟ್ಯೂಬ್ ಹಾಗೂ ವಾಹಿಗಳಿಗೆ ಮಾತನಾಡಿದ ಸಿದ್ದರಾಡ ಎಂಬಾತ ತಾನು ದರ್ಶನ್ ಅನ್ನು ಜೈಲಿನಲ್ಲಿ ಭೇಟಿಯಾಗಿದ್ದು, ದರ್ಶನ್ಗೆ ಯೋಗ ಹೇಳಿಕೊಟ್ಟೆ, ಧ್ಯಾನ ಹೇಳಿಕೊಟ್ಟೆ, ದರ್ಶನ್ ಜೊತೆಗೆ ಹಲವು ಸಮಯ ಮಾತನಾಡಿದೆ ಎಂದೆಲ್ಲ ಹೇಳಿಕೊಂಡಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ಇದನ್ನು ಅಲ್ಲಗಳೆದಿದ್ದು, ದರ್ಶನ್ ಅನ್ನು ಸಿದ್ಧಾರೂಡ ಭೇಟಿ ಆಗಿಲ್ಲ ಎಂದಿದ್ದಾರೆ. ಇದೀಗ ಪೊಲೀಸ್ ಇಲಾಖೆಯು ಸಿದ್ಧಾರೂಢಗೆ ನೊಟೀಸ್ ಜಾರಿ ಮಾಡಿದೆ.
ಸಿದ್ಧಾರೂಢನ ಸಂದರ್ಶನಗಳನ್ನು ಗಮನಿಸಿದ್ದ ಮೇಲಾಧಿಕಾರಿಗಳು, ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ದರು. ವಿಐಪಿ ಸೆಲ್ನೊಳಗಿದ್ದ ದರ್ಶನ್ ಅನ್ನು ಭೇಟಿ ಆಗಲು ಇತರೆ ಕೈದಿಗೆ ಅವಕಾಶ ನೀಡಲಾಗಿದೆಯೇ? ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಸಿದ್ದ ಜೈಲು ಅಧಿಕಾರಿಗಳು, ದರ್ಶನ್ ಭೇಟಿಗೆ ಯಾವುದೇ ಬೇರೆ ಕೈದಿಗಳಿಗೆ ವಿಶೇಷವಾಗಿ ಜೈಲು ಸೆಲ್ನೊಳಗೆ ಹೋಗಲು ಅವಕಾಶ ಕೊಟ್ಟಿಲ್ಲವೆಂದು ಉತ್ತರಿಸಿದ್ದಾರೆ. ಹಾಗಾಗಿ ಮಾಧ್ಯಮಗಳ ಮುಂದೆ ಸುಳ್ಳು ಹೇಳಿರುವ ಸಿದ್ಧಾರೂಢನಿಗೆ ಪೊಲೀಸ್ ಇಲಾಖೆ ನೊಟೀಸ್ ನೀಡಿದ್ದು, ವಿಚಾರಣೆಗೆ ಕರೆಯಲಾಗಿದೆ.
ಇದೇ ತಿಂಗಳ ಎಂಟನೇ ತಾರೀಖು ಬಳ್ಳಾರಿ ಜೈಲಿನಿಂದ ಪರಪ್ಪನ ಅಗ್ರಹಾರ ಜೈಲಿಗೆ ಸಿದ್ಧಾರೂಢ ಬಂದಿದ್ದ. ಆತನನ್ನು ಒಂಬತ್ತನೇ ತಾರೀಖು ಬಿಡುಗಡೆ ಮಾಡಿದ್ದೆವು. ಆತ ಇಲ್ಲಿ ದರ್ಶನ್ ಅನ್ನು ಭೇಟಿ ಆಗಿಲ್ಲ. ದರ್ಶನ್ ಸೆಲ್ ಒಳಕ್ಕೆ ಯಾರನ್ನೂ ಸಹ ಬಿಟ್ಟಿಲ್ಲ ಎಂದು ಜೈಲಧಿಕಾರಿಗಳು ಹೇಳಿದ್ದಾರೆ.