ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆ ಕಸರತ್ತು ಅಂತಿಮ ಹಂತಕ್ಕೆ ತಲುಪಿದ್ದು, ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಕೈಹಿಡಿದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಗ್ಗಟ್ಟಿನ ಸಂದೇಶ ರವಾನೆ ಮಾಡುವ ಪ್ರಯತ್ನ ನಡೆಸಿದ್ದಾರೆ.
ಸಿಎಂ ಆಯ್ಕೆ ವಿಚಾರವಾಗಿ ಕಾಂಗ್ರೆಸ್ ನಲ್ಲಿ ದೊಡ್ಡ ಮಟ್ಟದ ಗೊಂದಲ ಸೃಷ್ಟಿ ಆಗಿತ್ತು. ದೆಹಲಿಯಲ್ಲಿ ರಾಷ್ಟ್ರೀಯ ನಾಯಕರು ನಿರಂತರವಾಗಿ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ ನಡೆಸಿದ್ದರು.
ಆದರೆ ತಡ ರಾತ್ರಿಯಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಜೊತೆಗೆ ರಾಷ್ಟ್ರೀಯ ನಾಯಕರು ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಉಭಯ ನಾಯಕರ ಕೈ ಎತ್ತಿ ಹಿಡಿದು ಮಲ್ಲಿಕಾರ್ಜುನ ಖರ್ಗೆ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ. ಈ ಫೋಟೋವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿ, The winning team ! ಎಂದು ಹೇಳಿದ್ದಾರೆ.
ಸಿಎಂ ಆಯ್ಕೆ ಕಸರತ್ತು ಹಿನ್ನಲೆಯಲ್ಲಿ ಕೆಲವೇ ಕ್ಷಣಗಳಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸುದ್ದಿಗೋಷ್ಠಿಯನ್ನು ದೆಹಲಿಯಲ್ಲಿ ನಡೆಸಲಿದ್ದಾರೆ. ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ಸಿಎಂ ಯಾರು ಎಂಬ ಬಗ್ಗೆ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ.