ಮಾಜಿ ಸಚಿವ ಬಾಬಾ ಸಿದ್ಧಿಕಿ ಅವರನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಅವರ ಸಾವಿನ ಅಘಾತದಿಂದ ಅವರ ಕುಟುಂಬ ಇನ್ನೂ ಚೇತರಿಸಿಕೊಂಡಿಲ್ಲ. ಒಂದೆಡೆ, ತಂದೆಯನ್ನು ಕಳೆದುಕೊಂಡ ದುಃಖವನ್ನು ನಿಭಾಯಿಸಲು ಮಗ ಜೀಶನ್ ಸಿದ್ಧಿಕಿ ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ನಟ ಸಲ್ಮಾನ್ ಖಾನ್ ಕೂಡ ಬಾಬಾ ಸಿದ್ಧಿಕಿ ಹತ್ಯೆಯಿಂದ ಬಿಗ್ ಶಾಕ್ ಗೆ ಒಳಗಾಗಿದ್ದಾರೆ.
ಬಾಬಾ ಸಿದ್ಧಿಕಿ ಮತ್ತು ಸಲ್ಮಾನ್ ತುಂಬಾ ನಿಕಟ ಸಂಬಂಧ ಹೊಂದಿದ್ದರು. ಸಿದ್ಧಿಕಿ ಹತ್ಯೆಗೆ ಲಾರೆನ್ಸ್ ಬಿಷ್ಣೋಯ್ ಕಾರಣರಾಗಿದ್ದ. ಸಲ್ಮಾನ್ ಖಾನ್ ಮತ್ತು ದಾವೂದ್ಗೆ ಯಾರು ಸಹಾಯ ಮಾಡುತ್ತಾರೋ ಅವರ ಹೆಸರನ್ನು ಲಿಸ್ಟ್ನಲ್ಲಿ ಇಡಲಾಗುತ್ತದೆ ಎಂದು ಬಿಷ್ಣೋಯ್ ಗ್ಯಾಂಗ್ ಫೇಸ್ಬುಕ್ ಪೋಸ್ಟ್ ಮೂಲಕ ಬೆದರಿಕೆ ಹಾಕಿದೆ. ಹಾಗಾಗಿ ಸಲ್ಮಾನ್ ಜೊತೆಗಿನ ಆಪ್ತತೆಯಿಂದ ಸಿದ್ಧಿಕಿ ಪ್ರಾಣ ಕಳೆದುಕೊಳ್ಳಬೇಕಾಯಿತು ಎನ್ನಲಾಗಿದೆ. ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ಜೀಶನ್ ತಂದೆಯ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
‘ಆ ಘಟನೆಯ ನಂತರ ಸಲ್ಮಾನ್ ಭಾಯ್ ತುಂಬಾ ನಿರಾಶೆಗೊಂಡಿದ್ದಾರೆ. ಅಪ್ಪ ಮತ್ತು ಸಲ್ಮಾನ್ ಭಾಯ್ ಪರಸ್ಪರ ಸಹೋದರರಂತೆ ಇದ್ದರು. ಅವರ ಸಂಬಂಧ ತುಂಬಾ ವಿಶೇಷವಾಗಿತ್ತು. ತಂದೆಯ ಮರಣದ ನಂತರ ಭಾಯಿ ನಮಗೆ ತುಂಬಾ ಸಹಾಯ ಮಾಡಿದರು. ರಾತ್ರಿ ನಿದ್ದೆ ಬರುವುದಿಲ್ಲ ಎಂದೂ ಹೇಳಿದ್ದರು. ನಾವು ಯಾವಾಗಲೂ ಅವರಿಂದ ಬೆಂಬಲವನ್ನು ಪಡೆದಿದ್ದೇವೆ ಮತ್ತು ಅದನ್ನು ಸ್ವೀಕರಿಸುವುದನ್ನು ಮುಂದುವರಿಸುತ್ತೇವೆ’ ಎಂದು ಜೀಶನ್ ಸಿದ್ಧಿಕಿ ಬಿಬಿಸಿ ಹಿಂದಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಮೂರು ಬಾರಿ ಶಾಸಕರಾಗಿದ್ದ ಬಾಬಾ ಸಿದ್ಧಿಕಿ, 2004-2008ರ ಅವಧಿಯಲ್ಲಿ ಸಚಿವರಾಗಿದ್ದರು. ಫೆಬ್ರವರಿ 2024ರಲ್ಲಿ ಎನ್ಸಿಪಿಯ ಅಜಿತ್ ಪವಾರ್ ಬಣವನ್ನು ಸೇರಿದರು. ರಾಜಕೀಯ ವಲಯದಲ್ಲಿ ಪ್ರಸಿದ್ಧರಾಗಿದ್ದ ಸಿದ್ಧಿಕಿ ಹಿಂದಿ ಚಿತ್ರರಂಗದ ಅನೇಕ ನಟರೊಂದಿಗೆ ಸ್ನೇಹ ಸಂಬಂಧ ಹೊಂದಿದ್ದರು. ಶನಿವಾರ (ಅಕ್ಟೋಬರ್ 12) ರಾತ್ರಿ 9:30 ರ ಸುಮಾರಿಗೆ ಸಿದ್ಧಿಕಿ ಮೇಲೆ ಕೆಲವರು ನಾಲ್ಕೈದು ಗುಂಡುಗಳನ್ನು ಹಾರಿಸಿದರು. ಈ ಪೈಕಿ ಒಂದು ಗುಂಡು ಸಿದ್ಧಿಕಿಯ ಎದೆಗೆ ತಗುಲಿ ನಿಧನರಾಗಿದ್ದರು.