ಬೆಂಗಳೂರು: ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆರೋಪ ಮಾಡಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಈ ಬಾರಿ ನಾನು ಸಿಎಂ ಆಗಿಲ್ಲ ಅಂದರೆ ನನ್ನ ಜನ್ಮದಲ್ಲಿ ಸಿಎಂ ಆಗೋಕೆ ಸಾಧ್ಯವೇ ಇಲ್ಲ ಎಂದು ಗೊತ್ತಾಗಿ ಪಟ್ಟು ಹಿಡಿದಿದ್ದಾರೆ. ಸಿದ್ದರಾಮಯ್ಯ ಸಿ ಎಂ ಆಗಿ, ಪ್ರತಿಪಕ್ಷ ನಾಯಕರಾಗಿ ಈಗ ಮತ್ತೆ ಸಿಎಂ ಆಗಲು ಹೊರಟಿದ್ದಾರೆ. 2009 ರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಬ್ಲಾಕ್ ಮೇಲ್ ಮಾಡಿದ್ದರು” ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ವಿರೋಧ ಪಕ್ಷ ಸ್ಥಾನ ಕೊಟ್ಟರೆ ಇರುತ್ತೇನೆ, ಇಲ್ಲ ಅಂದರೆ ನನ್ನ ದಾರಿ ನೋಡಿಕೊಳ್ಳುತ್ತೇನೆ ಎಂದಿದ್ದರು. ಹಾಗಾಗಿ ಅಂದು ಪ್ರತಿಪಕ್ಷ ನಾಯಕರಾಗಿದ್ದ ಖರ್ಗೆ ಅವರನ್ನು ಲೋಕಸಭೆಗೆ ಕಳುಹಿಸಿ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಮಾಡ ಲಾಯಿತು. ಈಗಲೂ ಅದೇ ರೀತಿ ಬ್ಲಾಕ್ ಮೇಲ್ ತಂತ್ರ ಮಾಡುತ್ತಿದ್ದಾರೆ. ನನ್ನ ಸಿಎಂ ಮಾಡಿ ಇಲ್ಲವಾದರೆ ನನ್ನ ದಾರಿ ನನ್ನದು ಎಂದು ಮೊನ್ನೆ ಸೋನಿಯಾ ಗಾಂಧಿಗೆ ಕರೆ ಮಾಡಿ ಹೇಳಿದ್ದಾರೆ. ಹೀಗಾಗಿ ಈ ಪರಿಸ್ಥಿತಿ ನಿಭಾಯಿಸಲು ಹೈಕಮಾಂಡ್ಗೆ ಕಷ್ಟ ಆಗುತ್ತಿದೆ” ಎಂದು ನಾರಾಯಣ ಸ್ವಾಮಿ ಹೇಳಿದ್ದಾರೆ.