ತಾನು ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತೆ ಮತ್ತು ಆಂತರಿಕ ಕಾನೂನು ಸುವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆಯಾಗಿದ್ದು, ದೇಶಾದ್ಯಂತ ಅಪರಾಧ ಪ್ರಕರಣಗಳ ಪ್ರಮಾಣ ಶೇಕಡಾ 30ರಷ್ಟು ಇಳಿಕೆಯಾಗಿದೆ ಎಂದು ತಾಲಿಬಾನ್ ಸರ್ಕಾರದ ಒಳಾಡಳಿತ ವ್ಯವಹಾರಗಳ ಸಚಿವಾಲಯ ಹೇಳಿದೆ.
ಕಾಬೂಲ್ನಲ್ಲಿ ತಮ್ಮ ಸರ್ಕಾರದ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಮಂಡಿಸಿದ ಒಳಾಡಳಿತ ಉಪ ಸಚಿವ ಮೊಹಮ್ಮದ್ ನಬಿ ಒಮಾರಿ, ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ದೇಶದ ನಾಗರಿಕರು ಸುರಕ್ಷಿತವಾಗಿ ವಾಸಿಸಲು ಮತ್ತು ಪ್ರಾಂತ್ಯಗಳ ನಡುವೆ ಮುಕ್ತವಾಗಿ ಪ್ರಯಾಣಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ತಾಲಿಬಾನ್ ನಾಯಕ ಮುಲ್ಲಾ ಹಿಬತುಲ್ಲಾ ಅಖುಂಡ್ ಜಾದಾ ಅವರ ಆದೇಶಗಳು ಮತ್ತು ನ್ಯಾಯಾಲಯದ ತೀರ್ಪುಗಳಿಂದ ಮಾರ್ಗದರ್ಶನ ಪಡೆದ ಕಾರ್ಯತಂತ್ರದ ಯೋಜನೆಯ ಪ್ರಕಾರ ಸಚಿವಾಲಯದ ಚಟುವಟಿಕೆಗಳನ್ನು ಈಗ ವ್ಯವಸ್ಥಿತವಾಗಿ ನಿಯಂತ್ರಿಸಲಾಗುತ್ತದೆ ಮತ್ತು ನಿರ್ವಹಿಸಲಾಗುತ್ತದೆ ಎಂದು ಒಮಾರಿ ಹೇಳಿದರು.
“ರಾಷ್ಟ್ರವ್ಯಾಪಿ ಅಪರಾಧ ಪ್ರಮಾಣವು ಶೇಕಡಾ 30 ರಷ್ಟು ಕಡಿಮೆಯಾಗಿರುವುದು ರಾಷ್ಟ್ರೀಯ ಪಡೆಗಳ ಅವಿರತ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಭದ್ರತೆಯನ್ನು ಮತ್ತಷ್ಟು ಬಲಪಡಿಸಲು, ರಾಷ್ಟ್ರೀಯ ಪೊಲೀಸ್ ತರಬೇತಿ ಕೇಂದ್ರಗಳನ್ನು ವೃತ್ತಿಪರಗೊಳಿಸಲು ಮತ್ತು ಸಜ್ಜುಗೊಳಿಸಲು ಸಚಿವಾಲಯ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ಅಪಾಯದ ಪರಿಸ್ಥಿತಿಗಳನ್ನು ಎದುರಿಸಲು ಪೊಲೀಸರು ಈಗ ಸಂಪೂರ್ಣವಾಗಿ ಸಮರ್ಥರಾಗಿದ್ದಾರೆ” ಎಂದು ಸಚಿವರು ತಿಳಿಸಿದರು.
ದೇಶದ ಸುರಕ್ಷತಾ ವ್ಯವಸ್ಥೆಯ ಬಗ್ಗೆ ವಿಸ್ತೃತವಾದ ಮಾಹಿತಿ ನೀಡಿದ ಒಮಾರಿ, ಅಪಹರಣದ ಪ್ರಕರಣಗಳಲ್ಲಿ ಭದ್ರತಾ ಪಡೆಗಳು ನಡೆಸಿದ 250 ಕಾರ್ಯಾಚರಣೆಗಳಲ್ಲಿ 34 ಅಪಹರಣಕಾರರನ್ನು ಕೊಲ್ಲಲಾಗಿದೆ ಮತ್ತು 76 ಜನರನ್ನು ಬಂಧಿಸಲಾಗಿದೆ ಎಂದರು.