ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಕನ್ನಡಿಗರಿಗೆ ಹೆಜ್ಜೆ ಹೆಜ್ಜೆಗೂ ಅನ್ಯಾಯ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೇಸರಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳಬೇಕಿದ್ದ ರಾಜ್ಯದ ಸ್ಥಬ್ದಚಿತ್ರಕ್ಕೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಈ ಮೂಲಕ ಕೇಂದ್ರ ಸರ್ಕಾರವು ಮತ್ತೊಮ್ಮೆ ಒಕ್ಕೂಟ ವ್ಯವಸ್ಥೆಗೆ ಮಸಿ ಬಳಿದಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಕನ್ನಡಿಗರಿಗೆ ಹೆಜ್ಜೆ ಹೆಜ್ಜೆಗೂ ಅನ್ಯಾಯ ಮಾಡುತ್ತಿದೆ. ಬರ ಪರಿಹಾರ ನೀಡದೆ ಬರಿಗೈನಲ್ಲಿ ವಾಪಸ್ ಕಳಿಸಿದರು. ತೆರಿಗೆ ಪಾಲಿನಲ್ಲೂ ಅನ್ಯಾಯ, ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದೆ ಅನ್ಯಾಯ. ಇನ್ನೂ ಅದೆಷ್ಟು ಅನ್ಯಾಯವನ್ನು ಕನ್ನಡಿಗರು ಅವಡು ಕಚ್ಚಿಕೊಂಡು ಸಹಿಸಿಕೊಳ್ಳಬೇಕು? ಎಂದು ಪ್ರಶ್ನಿಸಿದ್ದಾರೆ.
ನವ ಕರ್ನಾಟಕದ ನಿರ್ಮಾತೃ, ಸಾಮಾಜಿಕ ನ್ಯಾಯದ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ದೇಶಕ್ಕೆ ಪರಿಚಯಿಸುವ ಉದ್ದೇಶವಿತ್ತು. ಅಲ್ಲದೆ, ಬ್ರ್ಯಾಂಡ್ ಬೆಂಗಳೂರನ್ನು ವಿಶ್ವವ್ಯಾಪಿ ಪ್ರಸಿದ್ಧಗೊಳಿಸುವ ಹಾಗೂ ಕಿತ್ತೂರು ಚೆನ್ನಮ್ಮಳ ಕೀರ್ತಿಯನ್ನು ಸ್ಥಬ್ದಚಿತ್ರಗಳ ಮೂಲಕ ಸಾರಿ ಹೇಳುವ ಉದ್ದೇಶವಿತ್ತು. ಹಾಗಾಗಿ, ಸ್ಥಬ್ದಚಿತ್ರಗಳಿಗೆ ಅವಕಾಶ ನೀಡಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.