ಬೆಂಗಳೂರು: ದಿನೇ ದಿನೇ ಹಸಿರಿನ ಪ್ರಮಾಣ ಕುಗ್ಗುತ್ತಿರುವ ಹಿನ್ನೆಲೆ ರಾಜಧಾನಿ ಬೆಂಗಳೂರು ಕಾಂಕ್ರೀಟ್ ಕಾಡಾಗಿ ಪರಿವರ್ತನೆಯಾಗುತ್ತಿದೆ. ಉದ್ಯಾನಗಳ ನಗರಿ ಎಂಬ ಖ್ಯಾತಿ ಪಡೆದಿರುವ ರಾಜಧಾನಿ ಬೆಂಗಳೂರಿನಲ್ಲಿ ಅತೀ ಹೆಚ್ಚು ತಾಪಮಾನದಿಂದ ಹಸಿರಿನ ಪ್ರಮಾಣ ನಾಶವಾಗುತ್ತಿದೆ. ಎಲ್ಯುಎಲ್ಸಿ ಈ ಕುರಿತು ಕೈಗೊಂಡ ಅಧ್ಯಯನ ಪ್ರಕಾರ, 2003 ಮತ್ತು 2021ರ ಅವಧಿಯಲ್ಲಿ ನಗರವು ಶೇ.59ರಷ್ಟು ಹಸಿರು ಹೊದಿಕೆ ಕಳೆದುಕೊಂಡಿದೆ.
2003ರಲ್ಲಿ 389.17 ಚದರ ಕಿಲೋ ಮೀಟರ್ ಸಸ್ಯ ವರ್ಗವಿದ್ದರೆ, 2021ರಲ್ಲಿ ಈ ಪ್ರಮಾಣ 158.77 ಚದರ ಕಿಮೀಗೆ ಇಳಿದಿದೆ. ಅದೇ ರೀತಿ, 2003ರಲ್ಲಿಕಾಂಕ್ರೀಟ್ ಆವರಿಸಿದ ಭೂಪ್ರದೇಶದ ಪ್ರಮಾಣ 244.17 ಚದರ ಕಿಲೋ ಮೀಟರ್ ಇದ್ದದ್ದು, 485.2 ಚದರ ಕಿಲೋ ಮೀಟರ್ಗೆ ಏರಿಕೆಯಾಗಿದೆ. ಆ ಮೂಲಕ ಶೇ.98ರಷ್ಟು ಹೆಚ್ಚು ಭೂಪ್ರದೇಶದಲ್ಲಿ ಕಾಂಕ್ರೀಟ್ ಆವರಿಸಿದೆ.
18 ವರ್ಷಗಳ ಅಲ್ಪಾವಧಿಯಲ್ಲಿನಗರವು ಇಷ್ಟು ದೊಡ್ಡ ಪ್ರಮಾಣದ ಹಸಿರು ಹೊದಿಕೆಯನ್ನು ಕಳೆದುಕೊಂಡಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ,” ಎಂದು ಐಐಎಸ್ಸಿ ಕ್ಯಾಂಪಸ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನ ಪ್ರಾಧ್ಯಾಪಕ ಡಾ.ಗುರ್ಫಾನ್ ಬೇಗ್ ಹೇಳಿದರು. ಹಸಿರಿನ ಪ್ರಮಾಣದಲ್ಲಿ ಇಳಿಕೆ, ಕಾಂಕ್ರೀಟೀಕರಣದ ಪರಿಣಾಮದಿಂದಾಗಿ ತಂಪನೆಯ ವಾತಾವರಣಕ್ಕೆ ಹೆಸರಾಗಿದ್ದ ಬೆಂಗಳೂರಿನಲ್ಲಿ ವಿಪರೀತ ಸೆಕೆ ಅನುಭವಾಗುತ್ತಿದೆ ಎಂದು ಪರಿಸರಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.