2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಗಾಜಾ ಪಟ್ಟಿಗೆ ಅಪಹರಿಸಿಕೊಂಡು ಹೋಗಿದ್ದ ಒತ್ತೆಯಾಳುಗಳ ಪೈಕಿ ಮತ್ತೆ ನಾಲ್ಕು ಜನ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ದೃಢಪಡಿಸಿವೆ. ಗಾಜಾದಲ್ಲಿ ಆಡಳಿತ ನಡೆಸುತ್ತಿದ್ದ ಗುಂಪುಗಳ ಬಳಿ ಈ ಮೃತರ ಶವಗಳಿವೆ ಎಂದು ತಿಳಿಸಿದೆ.
ಮೃತಪಟ್ಟ ನಾಲ್ವರನ್ನು ಅಮಿರಾಮ್ ಕೂಪರ್, ಚೈಮ್ ಪೆರಿ, ಯೊರಾಮ್ ಮೆಟ್ಜರ್ ಮತ್ತು ನಾಡವ್ ಪಾಪ್ಲೆವೆಲ್ ಎಂದು ಗುರುತಿಸಲಾಗಿದೆ. 80ರ ಹರೆಯದ ಕೂಪರ್, ಪೆರಿ ಮತ್ತು ಮೆಟ್ಜರ್ ಗಾಜಾ ಪಟ್ಟಿಯ ಗಡಿಯ ಬಳಿಯ ನಿರ್ ಓಜ್ ನಿವಾಸಿಗಳಾಗಿದ್ದು, ಡಿಸೆಂಬರ್ನಲ್ಲಿ ಹಮಾಸ್ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಜೀವಂತವಾಗಿ ಕಾಣಿಸಿಕೊಂಡಿದ್ದರು. 51 ವರ್ಷದ ಪಾಪ್ಲೆವೆಲ್ ನಿರ್ ಓಜ್ ಬಳಿಯ ನಿರಿಮ್ ಗ್ರಾಮದವರು. ಮೇ ಆರಂಭದಲ್ಲಿ ಹಮಾಸ್ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಅವರು ಕೊನೆಯ ಬಾರಿಗೆ ಜೀವಂತವಾಗಿ ಕಾಣಿಸಿಕೊಂಡಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಐಡಿಎಫ್ ವಕ್ತಾರ ಡೇನಿಯಲ್ ಹಗರಿ, “ಹಲವಾರು ತಿಂಗಳ ಹಿಂದೆ ಖಾನ್ ಯೂನಿಸ್ ಪ್ರದೇಶದಲ್ಲಿ ಇಸ್ರೇಲಿ ಪಡೆಗಳು ಸಂಘರ್ಷ ನಡೆಸುತ್ತಿರುವ ಸಂದರ್ಭದಲ್ಲಿಯೇ ಈ ನಾಲ್ವರು ಒಟ್ಟಿಗೆ ಕೊಲ್ಲಲ್ಪಟ್ಟಿದ್ದಾರೆ” ಎಂದು ಇಸ್ರೇಲ್ ಪಡೆಗಳು ಅಂದಾಜಿಸಿವೆ ಎಂದು ಹೇಳಿದರು.
ಗುಪ್ತಚರ ಮಾಹಿತಿಯನ್ನು ಆಧರಿಸಿ ಈ ಸಾವುಗಳನ್ನು ದೃಢೀಕರಿಸಲಾಗಿದೆ ಮತ್ತು ಈ ಮಾಹಿತಿಗಳನ್ನು ಆರೋಗ್ಯ ಸಚಿವಾಲಯದ ತಜ್ಞರ ಸಮಿತಿಯು ಅನುಮೋದಿಸಿದೆ. ಈ ನಾಲ್ವರು ಯಾವ ಸಂದರ್ಭಗಳಲ್ಲಿ ಸಾವಿಗೀಡಾದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಸೋಮವಾರ, ಐಡಿಎಫ್ ನಿರ್ ಓಜ್ ಗ್ರಾಮದಲ್ಲಿ 36 ವರ್ಷದ ವೈದ್ಯ ಡೊಲೆವ್ ಯೆಹುದ್ ಅವರ ಶವವನ್ನು ಪತ್ತೆಹಚ್ಚಿದೆ. ಸೋಮವಾರದವರೆಗೆ ಒತ್ತೆಯಾಳುಗಳೆಂದು ಪರಿಗಣಿಸಲ್ಪಟ್ಟಿದ್ದ ಯೆಹುದ್ ಅವರನ್ನು ಅಕ್ಟೋಬರ್ 7 ರಂದು ಹಮಾಸ್ ಕೊಂದಿದೆ ಎಂದು ಸೇನೆ ತಿಳಿಸಿದೆ. ಒಟ್ಟು 124 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಉಗ್ರರು ಹಿಡಿದಿಟ್ಟುಕೊಂಡಿದ್ದರು ಮತ್ತು ಅವರಲ್ಲಿ 43 ಮಂದಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಘೋಷಿಸಿದೆ.