ತುಮಕೂರು: ಪತಿಯಿಂದಲೇ ಪತ್ನಿಯ ಭೀಕರ ಕೊಲೆ ನಡೆದಿರುವ ಘಟನೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಹೊಸಪೇಟೆಯಲ್ಲಿ ನಡೆದಿದೆ. ಪುಪ್ಪ (32), ಕೊಲೆಯಾದ ಮಹಿಳೆಯಾಗಿದ್ದು, ಹುಲಿಯೂರುದುರ್ಗ ಬಳಿಯ ಸುಗ್ಗನಹಳ್ಳಿ ನಿವಾಸಿಯಾದ ಶಿವರಾಮ್ ಕೊಲೆಗಾರನಾಗಿದ್ದಾನೆ.
ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪಾಳನ್ನು ಶಿವರಾಮ್ ಮದುವೆಯಾಗಿದ್ದನು. ಹುಲಿಯೂರುದುರ್ಗ ಪಟ್ಟಣದಲ್ಲಿ ಪತ್ನಿ ಹಾಗೂ 8 ವರ್ಷದ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ.
ಮರದ ಸಾಮಿಲ್ ಒಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ ಶಿವರಾಮ್, ಕ್ಷುಲ್ಲಕ ಕಾರಣಕ್ಕೆ ಪತ್ನಿ ಪುಷ್ಪಾ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ನಿನ್ನೆ ಸೋಮವಾರ ರಾತ್ರಿಯೂ (ಮೇ 27) ಗಲಾಟೆಯಾಗಿದ್ದು, ಅದು ವಿಕೋಪಕ್ಕೆ ತಿರುಗಿದೆ. ಪತ್ನಿಯ ಕತ್ತು ಹಾಗೂ ದೇಹದ ಅಂಗಾಂಗ ಕತ್ತರಿಸಿ ಕೊಲೆ ಮಾಡಿದ್ದಾನೆ. ಶಿವರಾಮ್ ತನ್ನ ಮಗುವಿನ ಎದುರಿಗೆ ಕ್ರೌರ್ಯತೆಯನ್ನು ತೋರಿದ್ದಾನೆ.
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹುಲಿಯೂರುದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಂಡು ತುಂಡಾಗಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೈದ ಪತಿ ಶಿವರಾಮ್ನನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.