ಲಕ್ನೋ: ಐಸಿಸಿ ವಿಶ್ವಕಪ್ 2023ರ (World Cup 2023) ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಶ್ರೀಲಂಕಾ (Sri Lanka) ತಂಡ ಕೊನೆಗೂ ಗೆಲುವಿನ ಖಾತೆ ತೆರೆದಿದೆ.
ಶನಿವಾರ ಇಲ್ಲಿನ ಲಕ್ನೋದ (Lucknow) ಏಕನಾ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ (Netherlands) ವಿರುದ್ಧ ನಡೆದ ಪಂದ್ಯದಲ್ಲಿ 5 ವಿಕೆಟ್ಗಳ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ 48.2 ಓವರ್ಗಳಲ್ಲಿ 262 ರನ್ ಗಳಿಸಿತ್ತು. 264 ರನ್ಗಳ ಗುರಿ ಬೆನ್ನತ್ತಿದ್ದ ಲಂಕಾ ಪಡೆ 48.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿ ಗೆಲುವು ಸಾಧಿಸಿತು.
ನೆದರ್ಲೆಂಡ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಕಾಲಿನ್ ಅಕರ್ಮನ್ (Colin Ackermann) 29, ಸೈಬ್ರಾಂಡ್ ಎಂಗಲ್ಬ್ರೆಕ್ಟ್ 70 ರನ್ (82 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಲೋಗನ್ ವ್ಯಾನ್ ಬೀಕ್ 59 ರನ್ (75 ಎಸೆತ, 1 ಬೌಂಡರಿ, 1 ಸಿಕ್ಸರ್) ಬಾರಿಸುವ ಮೂಲಕ ತಂಡ 250 ಗಡಿ ದಾಟಲು ನೆರವಾದರು.
ಲಂಕಾ ಪರ ಬೌಲಿಂಗ್ನಲ್ಲಿ ದಿಲ್ಶಾನ್ ಮದುಶಂಕ (Dilshan Madushanka) ಮತ್ತು ಕಸೂನ್ ರಜಿತಾ (Kasun Rajitha) ತಲಾ 4 ವಿಕೆಟ್ ಪಡೆದರೆ, ಮಹೀಶ್ ತೀಕ್ಷಣ 1 ವಿಕೆಟ್ ಪಡೆದು ಮಿಂಚಿದರು.
ಇನ್ನೂ ಚೇಸಿಂಗ್ ಆರಂಭಿಸಿದ ಲಂಕಾ ಪಡೆ ವಿಕೆಟ್ ಉಳಿಸಿಕೊಂಡರೂ ನಿಧಾನಗತಿಯ ಬ್ಯಾಟಿಂಗ್ ಮಾಡಿದರೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಲಂಕಾ ಪರ ಪತುಮ್ ನಿಸಂಕಾ 54 ರನ್ (52 ಎಸೆತ, 9 ಬೌಂಡರಿ), ಸದೀರ ಸಮರವಿಕ್ರಮ (Sadeera Samarawickrama) ಅಜೇಯ 91 (7 ಬೌಂಡರಿ, 107 ಎಸೆತ) ರನ್ ಬಾರಿಸಿದ್ರೆ, ಚರಿತ್ ಅಸಲಂಕಾ 44 ರನ್ ಮತ್ತು ಧನಂಜಯ್ ಡಿಸಿಲ್ವಾ 30 ರನ್ ಬಾರಿಸಿ ಗೆಲುವಿನ ನಗೆ ಬೀರಿದರು.