ಬಾಲಿವುಡ್ನ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ನಟ ಝಹೀರ್ ಇಕ್ಬಾಲ್ ಅವರನ್ನು ಮದುವೆಯಾಗಿದ್ದಾರೆ. ಆದರೆ ಈ ಮದುವೆ ಅಂತರ್ ಧರ್ಮ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಚರ್ಚೆಗಳು ಶುರುವಾಗಿತ್ತು. ಅಲ್ಲದೆ ಸೋನಾಕ್ಷಿ ಕುಟುಂಬಕ್ಕೆ ಈ ಮದುವೆ ಸುತರಾಂ ಇಷ್ಟವಿರಲಿಲ್ಲ ಎಂದು ಹೇಳಲಾಗಿತ್ತು. ಆದರೂ ಇಷ್ಟವಿಲ್ಲದೆ ಮದುವೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಮಗಳ ಮದುವೆಯ ಬಗ್ಗೆ ನಟ ಶತ್ರುಘ್ನಾ ಸಿನ್ಹಾ ಹೆಚ್ಚಾಗಿ ಏನು ಮಾತನಾಡಿರಲಿಲ್ಲ. ಇದೀಗ ನಟಿಯ ಸಹೋದರ ಲವ್ ಸಿನ್ಹಾ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ನಿನ್ನೆ (ಜುಲೈ 9) ಲವ್ ಸಿನ್ಹಾ ಅವರು ತಂದೆ-ತಾಯಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ. ತಂದೆ ಶತ್ರುಘ್ನ ಸಿನ್ಹಾ, ತಾಯಿ ಪೂನಂ ಸಿನ್ಹಾ ಜೊತೆ ತಾವು ಮತ್ತು ಖುಷ್ ಸಿನ್ಹಾ ಇರುವ ಫೋಟೋವನ್ನು ಲವ್ ಸಿನ್ಹಾ ಶೇರ್ ಮಾಡಿಕೊಂಡಿದ್ದಾರೆ. ಇದು ಫ್ಯಾಮಿಲಿ ಫೋಟೋ ಆಗಿದ್ದರೂ ಕೂಡ ಇದರಲ್ಲಿ ಸೋನಾಕ್ಷಿ ಸಿನ್ಹಾ ಇರಲಿಲ್ಲ. ಬೇಕಂತಲೇ ತಂಗಿ ಇಲ್ಲದ ಫೋಟೋವನ್ನು ಲವ್ ಸಿನ್ಹಾ ಆಯ್ಕೆ ಮಾಡಿಕೊಂಡಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಝಹೀರ್ ಇಖ್ಬಾಲ್ನನ್ನು ಮದುವೆ ಆಗಿದ್ದಕ್ಕೆ ಲವ್ ಸಿನ್ಹಾ ಅವರು ತಂಗಿಯನ್ನು ಕುಟುಂಬದಿಂದಲೇ ಹೊರಗೆ ಇಟ್ಟಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
‘ನನ್ನ ಅದ್ಭುತ ತಂದೆ-ತಾಯಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನಿಮ್ಮ ಮಕ್ಕಳಾಗಿ ಜನಿಸುವುದಕ್ಕೆ ನಾವು ಪುಣ್ಯ ಮಾಡಿದ್ದೆವು. ನಿಮ್ಮ ಜೊತೆ ಕಳೆಯುವ ಪ್ರತಿ ಕ್ಷಣಕ್ಕೂ ನಾವು ಋಣಿ ಆಗಿದ್ದೇವೆ’ ಎಂದು ಲವ್ ಸಿನ್ಹಾ ಅವರು ಹೆತ್ತವರಿಗೆ ಮದುವೆ ವಾರ್ಷಿಕೋತ್ಸವದ ಶುಭ ಹಾರೈಸಿದ್ದಾರೆ.
ಸೋನಾಕ್ಷಿ ಸಿನ್ಹಾ-ಝಹೀರ್ ಇಖ್ಬಾಲ್ ಮದುವೆಗೆ ತಂದೆ ಶತ್ರುಘ್ನ ಸಿನ್ಹಾ, ತಾಯಿ ಪೂನಂ ಸಿನ್ಹಾ, ಸಹೋದರ ಖುಷ್ ಸಿನ್ಹಾ ಸಾಕ್ಷಿಯಾಗಿದ್ದರು. ಆದರೆ ಅಣ್ಣ ಲವ್ ಸಿನ್ಹಾ ಮಾತ್ರ ಮದುವೆಗೆ ಬಂದಿರಲಿಲ್ಲ. ಝಹೀರ್ ಇಖ್ಬಾಲ್ ಅವರನ್ನು ಸೋನಾಕ್ಷಿ ಮದುವೆ ಆಗುತ್ತಿರುವುದು ಲವ್ ಸಿನ್ಹಾಗೆ ಇಷ್ಟ ಇರಲಿಲ್ಲ ಎಂದು ಹೇಳಲಾಗುತ್ತಿದೆ. ತಂಗಿಯ ಮೇಲೆ ಅವರು ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಲವ್ ಸಿನ್ಹಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.