ಬೆಂಗಳೂರು: ನಾವು ಪ್ರಧಾನಿ ನರೇಂದ್ರ ಮೋದಿಯವರ ಸರಕಾರದ 10 ವರ್ಷಗಳ ಸಾಧನೆ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದರೆ ಕಾಂಗ್ರೆಸ್ ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂಬುದನ್ನೇ ಸಂಪೂರ್ಣ ಮರೆತಂತೆ ಕಾಣುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ”ರಾಹುಲ್ ಗಾಂಧಿಯವರ ನಾಯಕತ್ವ ಸಂಪೂರ್ಣ ವಿಫಲವಾಗಿದ್ದು, ಯಾರೊಬ್ಬರೂ ರಾಹುಲ್ ಗಾಂಧಿ ಹೆಸರು ಹೇಳಲು ಸಿದ್ಧರಿಲ್ಲದ ಪರಿಸ್ಥಿತಿ ಇದೆ. ಕಾಂಗ್ರೆಸ್ ಪಕ್ಷಕ್ಕೆ ವಿಶ್ವಾಸಾರ್ಹ ನಾಯಕತ್ವ ಇಲ್ಲ. ಜತೆಗೆ ಸರಕಾರದ ಸಾಧನೆಯ ಬೆಂಬಲವೂ ಇಲ್ಲದೆ ಕೇವಲ ಕೇಂದ್ರ ಸರಕಾರದ ಅನುದಾನದ ಬಗ್ಗೆ ಜನರ ದಾರಿ ತಪ್ಪಿಸಿ ವಿವಾದ ಸೃಷ್ಟಿಸಿ ಆ ಮೂಲಕ ಜನ ಬೆಂಬಲ ಗಳಿಸುವ ಭ್ರಮೆಯಲ್ಲಿದ್ದಾರೆ,” ಎಂದು ಹೇಳಿದರು.
”ಕಾಂಗ್ರೆಸ್ನವರು ಪದೇಪದೆ 2 ಕೋಟಿ ಉದ್ಯೋಗ ಕೊಟ್ಟಿದ್ದೀರಾ ಎಂದು ಪ್ರಶ್ನಿಸುತ್ತಾರೆ. ದೇಶದಲ್ಲಿ 2014ರಲ್ಲಿ 15.54 ಕೋಟಿ ಭವಿಷ್ಯನಿಧಿ ಖಾತೆ ಇದ್ದರೆ, 2022ರಲ್ಲಿ ಆ ಸಂಖ್ಯೆ 22.5 ಕೋಟಿ ದಾಟಿದೆ. ಅಂದರೆ 7 ಕೋಟಿ ಹೊಸ ಉದ್ಯೋಗ ಸೇರ್ಪಡೆಯಾಗಿದೆ. 2014ರಲ್ಲಿ ಎಂಎಸ್ಎಂಇಗಳು 5 ಕೋಟಿ ಉದ್ಯೋಗ ನೀಡಿದ್ದರೆ, 2022ರಲ್ಲಿ ಉದ್ಯೋಗ ಪ್ರಮಾಣ 6.3 ಕೋಟಿಗೆ ಏರಿಕೆಯಾಗಿದೆ,” ಎಂದು ವಿವರಿಸಿದರು.