ಸ್ಲೋವಾಕಿಯಾದ ಜನಪ್ರಿಯ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಫಿಕೊ ಅವರನ್ನು ಆಸ್ಪತ್ರೆಗೆ ದಾಖಲಾಗಿದೆ ಚಿಕಿತ್ಸೆ ನಡೆಯುತ್ತಿದೆ.
ಸ್ಲೋವಾಕಿಯಾದ ರಾಜಧಾನಿ ಬ್ರಾಟಿಸ್ಲಾವಾದ ಈಶಾನ್ಯಕ್ಕೆ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದ ಕಲ್ಚರ್ ಹೌಸ್ ಹೊರಗೆ ಪ್ರಧಾನಿ ಮೇಲೆ 4 ನಾಲ್ಕು ಗುಂಡುಗಳನ್ನು ಹಾರಿಸಲಾಗಿದೆ. ಬುಲೆಟ್ 59 ವರ್ಷದ ಫಿಕೊ ಅವರ ಹೊಟ್ಟೆಗೆ ತಗುಲಿದ್ದು ಸದ್ಯ ಪ್ರಧಾನಿಗೆ ಚಿಕಿತ್ಸೆ ಮುಂದುವರೆದಿದೆ.
ಸಭೆ ಮುಗಿಸಿ ಫಿಕೊ ಹೊರ ಬಂದಾಗ ಗುಂಡಿನ ದಾಳಿ ನಡೆದಿದೆ. ಘಟನೆಯ ಬಳಿಕ ಓರ್ವ ಶಂಕಿತನನ್ನು ಬಂಧಿಸಿದ್ದು, ಸ್ಥಳವನ್ನು ಸೀಲ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಇಂದು, ಹ್ಯಾಂಡ್ಲೋವಾದಲ್ಲಿ ಸರ್ಕಾರದ ಸಭೆಯ ನಂತರ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ಹತ್ಯೆಯ ಯತ್ನ ನಡೆದಿದೆ” ಎಂದು ಸರ್ಕಾರವು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ಸ್ಲೋವಾಕಿಯಾ ಸಂಸತ್ತಿನ ಉಪ ಸ್ಪೀಕರ್ ಲುಬೊಸ್ ಬ್ಲಾಹಾ ಅವರು ಅಧಿವೇಶನದಲ್ಲಿ ಪ್ರಧಾನಿ ಮೇಲೆ ದಾಳಿ ನಡೆದಿರುವುದನ್ನು ದೃಢಪಡಿಸಿದರು. ನಾವು ಹಿಂಸಾಚಾರವನ್ನು ಸಂಪೂರ್ಣವಾಗಿ ಮತ್ತು ಬಲವಾಗಿ ಖಂಡಿಸುತ್ತೇವೆ. ರಾಬರ್ಟ್ ಫಿಕೊ ಮೇಲಿನ ದಾಳಿ ಅನ್ನು ನಾವು ಖಂಡಿಸುತ್ತೇವೆ ಎಂದು ಪ್ರಗತಿಪರ ಸ್ಲೋವಾಕಿಯಾ ನಾಯಕ ಮೈಕಲ್ ಸಿಮೆಕಾ ಹೇಳಿದ್ದಾರೆ.