ಸ್ಲೊವಾಕಿನ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಬುಧವಾರ ಗುಂಡಿನ ದಾಳಿ ಸದ್ಯ ಫಿಕೋ ಅವರ ದೇಹಸ್ಥಿತಿ ಸ್ಥಿರವಾಗಿದೆಯಾದರೂ, ಇನ್ನೂ ಗಂಭೀರವಾಗಿದೆಯೆಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೀವ್ರ ಗುಂಡಿನ ಗಾಯಗಳಾಗಿರುವ ಫಿಕೋ ಅವರಿಗೆ ವೈದ್ಯರುಗಳು ಚಿಕಿತ್ಸೆಯನ್ನು ಮುಂದುವರಿಸಿದ್ದಾರೆಂದು ರಕ್ಷಣಾ ಸಚಿವ ರಾಬರ್ಟ್ ಕಾಲಿನಾಕ್ ಅವರು ಬಾನ್ಸ್ಕಾ ಬಿಸ್ಟ್ರಿಕಾ ನಗರದ ಆಸ್ಪತ್ರೆಯ ಹೊರಭಾಗದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಧಾನಿ ರಾಬರ್ಟ್ ಫಿಕೋ ಅವರು ಬುಧವಾರ ಬ್ರಾನ್ ಬಿಸ್ಟ್ರಿಕಾ ನಗರದ ಸಾಂಸ್ಕೃತಿಕ ಭವನದ ಹೊರಭಾಗದಲ್ಲಿ ತನ್ನ ಬೆಂಬಲಿಗರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಐದು ಗುಂಡುಗಳನ್ನು ಹಾರಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಓರ್ವ ಶಂಕಿತನನ್ನು ಬಂಧಿಸಲಾಗಿದ್ದು, ರಾಜಕೀಯ ಉದ್ದೇಶದಿಂದ ಈ ಹತ್ಯೆ ಯತ್ನ ನಡೆದಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದ ಆಂತರಿಕ ಸಚಿವ ಸುಟಾಜ್ ಎಸ್ಟೊಕ್ ತಿಳಿಸಿದ್ದಾರೆ.
ರಶ್ಯ ಪರ ನಿಲುವು ಹೊಂದಿರುವ ಫಿಕೊ ಅವರು ಕಳೆದ ವರ್ಷ ಮತ್ತೆ ಪ್ರಧಾನಿಯಾಗಿ ಅಧಿಕಾರ ವಹಿಸಿದ್ದರು. ಅವರ ಅಮೆರಿಕ ವಿರೋಧಿ ನಿಲುವು, ಯುರೋಪ ಒಕ್ಕೂಟದ ಇತರ ಸದಸ್ಯರಾಷ್ಟ್ರಗಳಿಗೆ ಕಳವಳ ಉಂಟು ಮಾಡಿತ್ತು.