ಬೆಂಗಳೂರು ;- ಸ್ಮಾರ್ಟ್ ಸಿಟಿ’ ಯೋಜನೆ ಮತ್ತೊಂದು ವರ್ಷ ವಿಳಂಬವಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು ಜೂನ್ 23ರೊಳಗೆ ಎಲ್ಲ ಕಾಮಗಾರಿಗಳು ಮುಗಿಯುತ್ತವೆ ಎಂದು ಸಮಜಾಯಿಷಿ ನೀಡುತ್ತಿದ್ದರು. ಆದರೆ, ಆ ಗಡುವು ಮುಗಿಯಲು ಒಂದೆರಡು ದಿನ ಬಾಕಿ ಇದ್ದರೂ ಏಳು ಕಾಮಗಾರಿಗಳು ನಡೆಯುತ್ತಲೇ ಇವೆ. ಇನ್ನೂ ಒಂದು ವರ್ಷ ಕಾಲಾವಕಾಶ ಸಿಕ್ಕಿರುವುದರಿಂದ ಕಾಮಗಾರಿಗಳು ಕ್ಷಿಪ್ರಗತಿ ಪಡೆದುಕೊಳ್ಳುವ ಸಾಧ್ಯತೆ ಕ್ಷೀಣಿಸಿದೆ. ಸುಮಾರು ₹300 ಕೋಟಿ ಮೊತ್ತದ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲೇ ಇವೆ.
ಬೆಂಗಳೂರನ್ನು ‘ಸ್ಮಾರ್ಟ್ ಸಿಟಿ ಯೋಜನೆಗೆ’ ಸಾಕಷ್ಟು ಹೋರಾಟ ಮಾಡಿ ಸೇರಿಸಲಾಗಿತ್ತು. ನಗರದಲ್ಲಿ ಐಕಾನ್ ಕಾಮಗಾರಿಗಳು ನಡೆಯುವ ನಿರೀಕ್ಷೆ ಇತ್ತು. ಆದರೆ, ಟೆಂಡರ್ಶ್ಯೂರ್ಗೆ ಅರ್ಧಕ್ಕಿಂತ ಹೆಚ್ಚಿನ ಹಣ ವ್ಯಯ ಮಾಡಲಾಗಿದೆ. 32 ರಸ್ತೆಗಳಲ್ಲಿ ಇನ್ನೂ 5 ರಸ್ತೆಗಳ ಕಾಮಗಾರಿ ಮುಗಿದಿಲ್ಲ.
ಇನ್ನು ಕೆ.ಆರ್. ಮಾರುಕಟ್ಟೆಯ ಆರ್ಥಿಕ ಕೇಂದ್ರದ ಮರು ಅಭಿವೃದ್ಧಿ ಕಾರ್ಯ ವರ್ಷಗಳಿಂದ ನಡೆಯುತ್ತಲೇ ಇದೆ. ಸ್ಥಳದಲ್ಲಿನ ಅವ್ಯವಸ್ಥೆ ಅಲ್ಲಿನ ಕಾಮಗಾರಿಯ ಆಮೆಗತಿಯ ಕೈಗನ್ನಡಿಯಾಗಿದೆ.
ಇದು ಇನ್ನೂ ಆರಂಭಿಕ ಹಂತದಲ್ಲೇ ಇದೆ. ಗಾಂಧಿಬಜಾರ್ನಲ್ಲಿ ಕಾರು ಪಾರ್ಕಿಂಗ್ ಕಾಮಗಾರಿ ಆರಂಭವೇ ಆಗಿಲ್ಲ. ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಇನ್ನೂ ಒಂದು ವರ್ಷ ಗಡುವು ವಿಸ್ತರಣೆಯಾಗಿರುವುದರಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆ.