ದೆಹಲಿ: ಲೋಕಸಭೆಯಲ್ಲಿ ಇಂದು ನಡೆದ ಗಂಭೀರ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ. ಇವರು ಯಾವುದೇ ಸಂಘಟನೆಗೆ ಸೇರಿದವರಲ್ಲ, ಸರ್ಕಾರದ ವಿರುದ್ಧ ಪ್ರತಿಭಟನೆಯೇ ಇವರ ಉದ್ದೇಶ ಎಂದು ತಿಳಿದುಬಂದಿದೆ.
ಶೂಗಳ ಒಳಗೆ ಗ್ಯಾಸ್ ಕ್ಯಾನಿಸ್ಟರ್ಗಳನ್ನು ಇಟ್ಟುಕೊಂಡು ಒಳಗೆ ಕೊಂಡೊಯ್ದಿದ್ದು ಹಳದಿ ಅನಿಲವನ್ನು ಸ್ಪ್ರೇ ಮಾಡಿದ್ದಾರೆ. ಜೊತೆಗೆ ʼತಾನಾಶಾಹಿ ನಹೀ ಚಲೇಗೀʼ (ಸರ್ವಾಧಿಕಾರವನ್ನು ಸಹಿಸುವುದಿಲ್ಲ) ಎಂಬ ಸ್ಲೋಗನ್ ಕೂಗಿದ್ದಾರೆ.
ಇವರಲ್ಲಿ ಒಬ್ಬಾತ ಡಿ.ಮನೋರಂಜನ್ ಎಂದು ಗುರುತಿಸಲಾಗಿದೆ. ಮನೋರಂಜನ್ ಮೈಸೂರಿನವನು ಹಾಗೂ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಎಂದು ಗೊತ್ತಾಗಿದೆ. ಇನ್ನೊಬ್ಬಾತ ಸಾಗರ್ ಶರ್ಮಾ ಎಂಬ ಹೆಸರಿನವನು.
ಇಬ್ಬರಲ್ಲಿ ಒಬ್ಬನ ಬಳಿ ಲಖನೌ ಮೂಲದ ಆಧಾರ್ ಕಾರ್ಡ್ ದೊರೆತಿದೆ. ವಿಚಾರಣೆಯ ವೇಳೆ “ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಿದ್ದೇವೆ. ನಾವು ವಿದ್ಯಾರ್ಥಿಗಳು. ನಾವು ಯಾವುದೇ ಸಂಘಟನೆಗೆ ಸೇರಿಲ್ಲ. ನಮ್ಮ ಹಕ್ಕುಗಳನ್ನು ದಮನಿಸಲಾಗುತ್ತಿದೆ. ಸರ್ವಾಧಿಕಾರದ ವಿರುದ್ಧ ನಮ್ಮ ಹೋರಾಟʼʼ ಎಂದು ಹೇಳಿದ್ದಾರೆ ಎಂದು ಗೊತ್ತಾಗಿದೆ.
ಇದು ಲೋಕಸಭೆಯ ಒಳಗೆ ನಡೆದರೆ, ಸಂಸತ್ತಿನ ಹೊರಗೆ ಇಬ್ಬರು ಪ್ರತಿಭಟನಾಕಾರರನ್ನು ಸ್ಥಳೀಯ ಪೊಲೀಸರು ಬಂಧಿಸಿದರು. ಇವರಿಬ್ಬರೂ ಸಂಸತ್ತಿನ ಒಳಗಿದ್ದ ದುಷ್ಕರ್ಮಿಗಳಂತೆಯೇ ಬಣ್ಣದ ಹೊಗೆ ಸಿಡಿಸಿ ಪ್ರತಿಭಟನೆ ನಡೆಸುತ್ತಿದ್ದರು.ಇವರಲ್ಲಿ ಒಬ್ಬಾತ ಅಮೋಲ್ ಶಿಂಧೆ (24) ಹಾಗೂ ಇನ್ನೊಬ್ಬಾಕೆ ನೀಲಂ (42) ಎಂಬ ಮಹಿಳೆ ಎಂದು ಗುರುತು ಹಿಡಿಯಲಾಗಿದೆ. ನೀಲಂ ಹರ್ಯಾಣದ ಹಿಸಾರ್ನವಳು.
ಸುಮಾರು ಹತ್ತಡಿ ಎತ್ತರವಿದ್ದ ವೀಕ್ಷಕರ ಗ್ಯಾಲರಿಯಿಂದ ಮೊದಲ ವ್ಯಕ್ತಿ ಕೆಳಗೆ ಜಿಗಿದಿದ್ದಾನೆ. ಆತ ಕೆಳಗೆ ಬಿದ್ದಿರಬಹುದು ಎಂದು ಎಲ್ಲರೂ ಮೊದಲು ಭಾವಿಸಿದ್ದರು. ಜಿಗಿದ ಸಾಗರ್ ಶರ್ಮಾ ಹಳದಿ ಅನಿಲ ಸ್ಪ್ರೇ ಮಾಡತೊಡಗಿದಾಗ ಭದ್ರತಾ ಸಿಬ್ಬಂದಿ ಮತ್ತು ಸಂಸದರು ಎಚ್ಚೆತ್ತುಕೊಂಡರು. ಮನೋರಂಜನ್ ವೀಕ್ಷಕರ ಗ್ಯಾಲರಿಯಲ್ಲಿದ್ದು ಕಲರ್ ಗ್ಯಾಸ್ ಸ್ಪ್ರೇ ಮಾಡಿದ್ದ.