ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡುವೆ ಆಗಾಗ ವಾಕ್ಸಮರ ನಡೆಯುತ್ತಿರುತ್ತದೆ. ಇದೀಗ ಭಾರತ್ ಜೋಡೋ ಯಾತ್ರೆ ಮತ್ತು ಕರ್ನಾಟಕ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ‘ಮೊಹಬ್ಬತ್ ಕಿ ದುಖಾನ್’ ಹೇಳಿಕೆಯ ಬಗ್ಗೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರ “ಮೊಹಬ್ಬತ್” (ಪ್ರೀತಿ) ಎಂದರೆ ಹಿಂದೂ ಜೀವನ ವಿಧಾನವನ್ನು ಖಂಡಿಸುವುದು, ಸಿಖ್ಖರ ಹತ್ಯೆ ಮತ್ತು ಭಾರತದ ಪ್ರಜಾಪ್ರಭುತ್ವಕ್ಕೆ ಹಾನಿ ಮಾಡಲು ಹೊರಗಿನ ಹಸ್ತಕ್ಷೇಪವನ್ನು ಬಯಸುವುದೇ ಎಂದು ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.
ನಿಮ್ಮದು ಯಾವ ರೀತಿಯ ಪ್ರೀತಿ?
ನೀವು ‘ಮೊಹಬ್ಬತ್’ ಬಗ್ಗೆ ಮಾತನಾಡುವಾಗ, ಅದರಲ್ಲಿ ರಾಜಸ್ಥಾನದಲ್ಲಿ ಮಹಿಳೆಯರ ಅಪಹರಣವೂ ಸೇರಿದೆಯೇ? ನೀವು ‘ಮೊಹಬ್ಬತ್’ ಬಗ್ಗೆ ಮಾತನಾಡುವಾಗ, ಅದು ಹಿಂದೂ ಜೀವನ ವಿಧಾನವನ್ನು ಖಂಡಿಸುತ್ತದೆಯೇ? ನೀವು ‘ಮೊಹಬ್ಬತ್’ ಬಗ್ಗೆ ಮಾತನಾಡುವಾಗ, ಭಾರತವನ್ನು ಒಡೆಯಲು ಬಯಸುವವರ ಜೊತೆ ಪಾಲುದಾರಿಕೆ ಎಂದು ಅರ್ಥವೇ? ನೀವು ‘ಮೊಹಬ್ಬತ್’ ಬಗ್ಗೆ ಮಾತನಾಡುವಾಗ ಪ್ರಜಾಪ್ರಭುತ್ವದ ವಿರುದ್ಧ ಹೊರಗಿನ ಹಸ್ತಕ್ಷೇಪವನ್ನು ಹುಡುಕಲು ಆ ‘ಮೊಹಬ್ಬತ್’ ನಿಮ್ಮನ್ನು ಒತ್ತಾಯಿಸುತ್ತದೆಯೇ ಎಂದು ಸ್ಮೃತಿ ಇರಾನಿ, ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಅವರು 2022 ರಲ್ಲಿ ನಡೆಸಿದ ಭಾರತ್ ಜೋಡೋ ಯಾತ್ರೆಯ ವೇಳೆ ಮೊಹಬ್ಬತ್ ಕಿ ದುಖಾನ್ ಎಂಬ ಘೋಷಣೆ ಬಳಸಿದ್ದರು. ಕರ್ನಾಟಕ ಚುನಾವಣಾ ಪೂರ್ವ ಪ್ರಚಾರದ ವೇಳೆಯೂ ಬಳಸಿದ್ದರು. ಇದೀಗ ಅಮರಿಕ ಪ್ರವಾಸದಲ್ಲೂ ಬಳಸುತ್ತಿದ್ದಾರೆ.
ರಾಹುಲ್ ಗಾಂಧಿಯವರು ಇತ್ತೀಚೆಗೆ ತಮ್ಮ ಅಮೇರಿಕಾ ಪ್ರವಾಸದ ಸಂದರ್ಭದಲ್ಲಿ ಮೋದಿ ಸರ್ಕಾರ ಮತ್ತು ಆರ್ಎಸ್ಎಸ್ನ ಮೇಲೆ ಹಲವಾರು ಪ್ರಶ್ನೆಗಳನ್ನು ಎತ್ತಿದಾಗ ಮಾಡಿದ ಹೇಳಿಕೆಗಳಿಗಾಗಿ ಆಡಳಿತಾರೂಢ ಬಿಜೆಪಿಯಿಂದ ಟೀಕೆಗೆ ಒಳಗಾಗಿದ್ದಾರೆ.