ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮುಸ್ಲಿಮರ ಪವಿತ್ರ ನಗರಗಳಲ್ಲಿ ಒಂದಾದ ಮದೀನಾಗೆ ಭೇಟಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಮುಸ್ಲಿಮೇತರ ಭಾರತೀಯ ನಿಯೋಗವೊಂದು ನಗರವನ್ನು ತಲುಪಿದೆ. ಕೇಂದ್ರ ಸಚಿವೆಯ ಮದೀನಾ ಭೇಟಿ ಬೆನ್ನಲ್ಲೇ ಮುಸ್ಲಿಂ ಮೂಲಭೂತವಾದಿಗಳು ಸೌದಿ ಅರೇಬಿಯಾ ವಿರುದ್ಧ ಕೆಂಗಣ್ಣು ಬೀರಿದ್ದಾರೆ.
ಸಚಿವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಮದೀನಾಕ್ಕೆ ಐತಿಹಾಸಿಕ ಪ್ರಯಾಣವನ್ನು ಕೈಗೊಂಡಿದ್ದೇನೆ. ಇಸ್ಲಾಂ ಧರ್ಮದ ಪವಿತ್ರ ನಗರಗಳಲ್ಲಿ ಒಂದಾದ ಪೂಜ್ಯ ಪ್ರವಾದಿಯ ಮಸೀದಿ, ಅಲ್ ಮಸ್ಜಿದ್ ಅಲ್ ನಬ್ವಿ, ಉಹುದ್ ಪರ್ವತ ಮತ್ತು ಇಸ್ಲಾಂನ ಮೊದಲ ಮಸೀದಿಯಾದ ಕುಬಾ ಮಸೀದಿಗೆ ಭೇಟಿ ನೀಡಿದ್ದೇನೆ ಎಂದು ಬರೆದು ಕೊಂಡಿದ್ದಾರೆ. ಸ್ಮೃತಿ ಇರಾನಿ ಅವರ ಈ ಭೇಟಿಯು ಭಾರತೀಯ ಯಾತ್ರಾರ್ಥಿಗಳಿಗೆ 2024ರ ಹಜ್ ಯಾತ್ರೆಯನ್ನು ಸುಗಮವಾಗಿಸಲು ಮತ್ತು ಅಗತ್ಯವಿರುವ ವ್ಯವಸ್ಥೆಗಳನ್ನು ಕಲ್ಪಿಸುವ ಉದ್ದೇಶ ಹೊಂದಿದೆ
ಆದರೆ ಮುಸ್ಲಿಮೇತರ ನಿಯೋಗದ ಭೇಟಿಗೆ ಇಸ್ಲಾಂ ಮೂಲಭೂತವಾದಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಸ್ಲಿಮೇತರ ಮಹಿಳೆಗೆ ಮದೀನಾಗೆ ಭೇಟಿ ನೀಡಲು ಅವಕಾಶ ನೀಡಬಾರದು ಎಂದು ಪ್ರತಿಪಾದಿಸಿರುವ ಅವರು, ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ಗೆ ಹಿಡಿಶಾಪ ಹಾಕುತ್ತಿದ್ದಾರೆ