ಚಿಕ್ಕಮಗಳೂರು: ರಾಜ್ಯದ ಹೆಸರಾಂತ ಉರಗತಜ್ಞರಲ್ಲಿ ಒಬ್ಬರಾಗಿದ್ದ ಚಿಕ್ಕಮಗಳೂರಿನ ಸ್ನೇಕ್ ನರೇಶ್(51 ವರ್ಷ) ತಾವೇ ಹಿಡಿದಿದ್ದ ನಾಗರ ಹಾವು ಕಚ್ಚಿ ದುರ್ಮರಣ ಹೊಂದಿದ್ದಾರೆ.
ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಸಮೀಪ ನಾಗರಹಾವೊಂದನ್ನು ಸೆರೆಹಿಡಿದಿದ್ದ ನರೇಶ್ ಹಾವನ್ನು ಚೀಲದಲ್ಲಿ ತುಂಬಿ ಸ್ಕೂಟಿಯ ಡಿಕ್ಕಿಯಲ್ಲಿ ಇಟ್ಟಿದ್ದರು. ಅದಾದ ಮೇಲೆ ಮತ್ತೊಂದು ಹಾವು ಹಿಡಿಯಲು ಕರೆ ಬಂದಿತ್ತು. ಸ್ಕೂಟಿಯ ಡಿಕ್ಕಿಯಲ್ಲಿ ಇಟ್ಟಿದ್ದ ಹಾವಿನ ಚೀಲವನ್ನು ಬಿಗಿಯಾಗಿ ಕಟ್ಟಲು ಎಂದು ಸ್ಕೂಟಿಯ ಡಿಕ್ಕಿ ಓಪನ್ ಮಾಡಿದಾಗ ಚೀಲದಿಂದ ಹೊರಬಂದಿದ್ದ ನಾಗರಹಾವು ನರೇಶ್ ಅವರಿಗೆ ಕಚ್ಚಿತ್ತು ಎಂದು ತಿಳಿದುಬಂದಿದೆ. ನರೇಶ್ ಅವರನ್ನು ಆಸ್ಪತ್ರೆಗೆ ತರುವಷ್ಟರಲ್ಲಿ ಅವರ ದೇಹಕ್ಕೆ ನಾಗರಹಾವಿನ ವಿಷವೇರಿ ಮೃತಪಟ್ಟಿದ್ದರು ಎನ್ನಲಾಗಿದೆ.
ಸ್ನೇಕ್ ನರೇಶ್ ಎಂದೇ ಹೆಸರುವಾಸಿಯಾಗಿದ್ದ ಇವರು ಸುಮಾರು 27 ವರ್ಷಗಳಿಂದ ಚಿಕ್ಕಮಗಳೂರು ಸುತ್ತಮುತ್ತ ಮಾತ್ರವಲ್ಲದೇ ರಾಜ್ಯದ ನಾನಾಭಾಗಗಳಲ್ಲಿ ಸಾವಿರಾರು ಹಾವುಗಳನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಜನರ ಜೀವವನ್ನು ಕಾಪಾಡಿದ್ದಾರೆ.
ಸುಮಾರು 250ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು, ಸುಮಾರು 40 ಹೆಬ್ಬಾವುಗಳನ್ನು, 20 ಸಾವಿರಕ್ಕೂ ಅಧಿಕ ಇತರೆ ಹಾವುಗಳನ್ನು ಹಿಡಿದು ರಕ್ಷಣೆ ಮಾಡಿದ್ದರು ಎನ್ನಲಾಗಿದೆ.
ಸ್ನೇಕ್ ನರೇಶ್ ಅವರು 2013ರಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿದ್ದರು.
ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಹಾವುಗಳ ರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿಯನ್ನು ಸಹ ನೀಡುತ್ತಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮನೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿಷಕಾರಿ ಹಾವುಗಳು ಕಂಡಾಗಿ ತಕ್ಷಣ ನೆರವಿಗೆ ಬರುತ್ತಿದ್ದ ಸ್ನೇಕ್ ನರೇಶ್ ಸಾವಿಗೆ ಚಿಕ್ಕಮಗಳೂರು ನಗರದ ಜನತೆ ತಮ್ಮ ಕಂಬಿನಿ ಮಿಡಿದಿದ್ದಾರೆ