ಗಂಗಾವತಿ: ಪಟ್ಟಣದ ಮಾರುಕಟ್ಟೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಮಣ್ಣೆತ್ತುಗಳ ಮಾರಾಟ ಭರ್ಜರಿಯಾಗಿದೆ. ಭಾನುವಾರ ಮಣ್ಣೆತ್ತಿನ ಅಮಾವಾಸ್ಯೆ. ಹೀಗಾಗಿ ರೈತರು ಸೇರಿದಂತೆ ಸಾರ್ವಜನಿಕರು ಮಣ್ಣೆತ್ತಿನ ಗೊಂಬೆಗಳನ್ನು ಖರೀದಿಸುತ್ತಿದ್ದಾರೆ. ಇಲ್ಲಿನ ಚಿತ್ರಗಾರ, ಕುಂಬಾರ ಸಮುದಾಯದ ಕೆಲವರು ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಕಾರಹುಣ್ಣಿಮೆ ನಂತರ ಬರುವುದೇ ಮಣ್ಣೆತ್ತಿನ ಅಮಾವಾಸ್ಯೆ. ಮಣ್ಣೆತ್ತಿನ ಅಮವಾಸ್ಯೆಯಂದು ರೈತರು ಹೊಲಕ್ಕೆ ಹೋಗಿ ಜಿಗುಟಾದ ಮಣ್ಣನ್ನು ತಂದು ಮನೆಯಲ್ಲಿ ಮಣ್ಣಿನಿಂದ ಜೋಡಿ ಎತ್ತುಗಳನ್ನು ಮಾಡುತ್ತಾರೆ. ನಂತರ ಮಣ್ಣಿನ ಎತ್ತುಗಳಿಗೆ ಸಿಂಗಾರ ಮಾಡುತ್ತಾರೆ.