ಅಬುಧಾಬಿ: ದುಬಾಯಿಯಲ್ಲಿ ಅಪರೂಪದ ಕಾರ್ ನಂಬರ್ ಪ್ಲೇಟನ್ನು ಶ್ರೀಮಂತ ವ್ಯಕ್ತಿ 123 ಕೋಟಿ ರೂ. ಪಾವತಿಸಿ ಖರೀದಿಸಿದ್ದು ವಿಶ್ವದಾಖಲೆಯಾಗಿದೆ.
ಶನಿವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಿ-7 ಎಂಬ ನಂಬರ್ಪ್ಲೇಟ್ 123 ಕೋಟಿ ರೂ.ಗೆ ಮಾರಾಟವಾಗಿದೆ.
ಪಿ ಸಂಖ್ಯೆ ಬದಿಯಲ್ಲಿರುವುದರಿಂದ ಮೇಲ್ನೋಟಕ್ಕೆ ಇದರಲ್ಲಿರುವ 7 ಎಂಬ ನಂಬರ್ ಮಾತ್ರ ಎದ್ದುಕಾಣುತ್ತದೆ. ಈ ಹರಾಜು ಪ್ರಕ್ರಿಯೆಯಲ್ಲಿ ಸಂಗ್ರಹಿಸಿದ ಹಣವನ್ನು ದುಬೈ ದೊರೆ ಶೇಖ್ ಮುಹಮ್ಮದ್ ಬಿನ್ ರಶೀದ್ ಅವರ ಜಾಗತಿಕ ಆಹಾರ ನೆರವು ಯೋಜನೆಗೆ ಜಮೆಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಶ್ರೀಮಂತರು ತಮ್ಮ ಸ್ಥಾನಮಾನ ಪ್ರದರ್ಶಿಸಲು ಕಾರಿಗೆ ಬಳಸುವ ಫ್ಯಾನ್ಸಿ ನಂಬರ್ ಗಳನ್ನು ಯುಎಇಯಲ್ಲಿ ಹರಾಜು ಹಾಕಲಾಗುತ್ತದೆ. 2008ರಲ್ಲಿ ಅಬುಧಾಬಿಯಲ್ಲಿ `ನಂಬರ್ 1′ ಎಂಬ ಸಂಖ್ಯೆಯನ್ನು ಹೊಂದಿರುವ ನಂಬರ್ಪ್ಲೇಟ್ ಸುಮಾರು 117 ಕೋಟಿ ರೂ.ಗೆ ಹರಾಜಾಗಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಪಿ-7 ನಂಬರ್ ಪ್ಲೇಟ್ 123 ಕೋಟಿಗೆ ಹರಾಜಾಗುವ ಮೂಲಕ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದೆ.