ಬೆಂಗಳೂರು:- ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಲ್ಪಿಸಿ ಎಂದು DCM ಡಿಕೆಶಿಗೆ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.
ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ, ಬೆಂಗಳೂರಿನ ಟ್ರಾಫಿಕ್ ಪರಿಸ್ಥಿತಿ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಶೋಚನೀಯ ಸ್ಥಿತಿಯನ್ನು ಟೀಕಿಸಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ದೃಶ್ಯವು ಪ್ರತಿ ದಿನವೂ ಮತ್ತಷ್ಟು ಯಾತನಾಮಯವಾಗಿರುತ್ತದೆ. ಸಾಧಾರಣವಾಗಿ ಭಾನುವಾರ ಸ್ವಲ್ಪ ಕಡಿಮೆಯಿದ್ದರೆ ವಾರದ ಇತರ ದಿನಗಳಲ್ಲಿ ದುಸ್ವಪ್ನದಂತಿರುತ್ತವೆ ಎಂದಿದ್ದಾರೆ.
ಭಾರತದ ಐಟಿ ಹಬ್ನಲ್ಲಿ ಸಾವಿರಾರು ಹೊಸ ಖಾಸಗಿ ವಾಹನಗಳು ರಸ್ತೆಗಿಳಿಯುತ್ತಿರುವುದೇ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಉಲ್ಬಣಗೊಳಿಸುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಆರೋಪಿಸಿದ್ದಾರೆ. “ಬೆಂಗಳೂರು ನಗರದಲ್ಲಿನ ರಸ್ತೆಗಳು, ವಸತಿ ಪ್ರದೇಶಗಳಲ್ಲಿನ ಸಣ್ಣ ಲೈನ್ಗಳು ವಾಹನ ನಿರ್ವಹಣೆಯ ಸಾಮರ್ಥ್ಯವನ್ನು ಮೀರಿವೆ. ಹೆಚ್ಚಿನ ಹೊಸ ರಸ್ತೆಗಳನ್ನು ನಿರ್ಮಾಣ ಮಾಡಲು ಈಗ ಸ್ಥಳದ ಅಭಾವವಿದೆ. ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸಾರಿಗೆ ಆಯ್ಕೆಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರವು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸೂರ್ಯ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.
“ಹೆಚ್ಚು ದರ ಕೇಳುವ ಉಬರ್ ಓಲಾ ಟ್ಯಾಕ್ಸಿಗಳು ವಿಶ್ವಾಸಾರ್ಹವಲ್ಲ. ಅವರು ನಾವು ಹೇಳಿದ ಕಡೆ ಬರುವುದಿಲ್ಲ. ನಮ್ಮ ಫುಟ್ಪಾತ್ಗಳು ಪಾದಚಾರಿ ಸ್ನೇಹಿಯಾಗಿಲ್ಲ ಮತ್ತು ಹೆಚ್ಚಿನ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದಾರೆ. ‘ಜೀವನದ ಗುಣಮಟ್ಟ ದಿನೇ ದಿನೇ ಹದಗೆಡುತ್ತಿದೆ’ ಎಂದ ತೇಜಸ್ವಿ ಸೂರ್ಯ, ಹೊಂಡ ಮತ್ತು ಅವೈಜ್ಞಾನಿಕ ಹಂಪ್ಗಳನ್ನು ಹೊಂದಿರುವ ನಗರದಾದ್ಯಂತ ರಸ್ತೆಗಳ ದಯನೀಯ ಸ್ಥಿತಿಯನ್ನು ಎತ್ತಿ ತೋರಿಸಿದ್ದಾರೆ. “ಬಿಬಿಎಂಪಿ ಮತ್ತು ಅದರ ಅಧಿಕಾರಿಗಳು ವಸತಿ ಪ್ರದೇಶಗಳಲ್ಲಿನ ಎಲ್ಲಾ ವಾಣಿಜ್ಯ ಬೆಳವಣಿಗೆಗಳತ್ತ ಕಣ್ಣು ಮುಚ್ಚುತ್ತಾರೆ, ಇದು ಟ್ರಾಫಿಕ್ ದಟ್ಟಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ” ಎಂದು ಸಂಸದ ಹೇಳಿದ್ದಾರೆ.