ಬೆಂಗಳೂರು:- ಸೋಮಶೇಖರ್ ಮತ ಕಾಂಗ್ರೆಸ್ ಪಕ್ಷಕ್ಕೆ 25 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂದು ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ರಮೇಶ್ ಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ.
ಎಸ್ ಟಿ ಸೋಮಶೇಖರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಅಡ್ಡಮತ ಹಾಕಿದರು ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ ರೊಚ್ಚಿಗೆದ್ದ ಮೈತ್ರಿ ಪಕ್ಷಗಳ ಕಾರ್ಯಕರ್ತರು, ಜೆಡಿಎಸ್ ನಗರ ಘಟಕದ ಅಧ್ಯಕ್ಷರಾದ ಹೆಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಬಿಜೆಪಿ ಪಕ್ಷದಿಂದ ಗೆದ್ದಿದ್ದ ಎಸ್ ಟಿ ಸೋಮಶೇಖರ್ ರಾಜಕೀಯ ಸ್ವಾರ್ಥಕ್ಕಾಗಿ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಗೌಡ, ಶಾಸಕ ಎಸ್ ಟಿ ಸೋಮಶೇಖರ್ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ವಿಧಾನಸಭೆ ಸ್ಪೀಕರ್ ಅವರು ಅನರ್ಹಗೊಳಿಸಬೇಕು. ಅಡ್ಡಮತ ಹಾಕಲಿಕ್ಕಾಗಿ ಅವರು ಕಾಂಗ್ರೆಸ್ನಿಂದ 25 ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಒಂದು ವೇಳೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸದಿದ್ದರೆ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು. ಅಲ್ಲದೆ, ನಾಳೆಯಿಂದಲೇ ಬೆಂಗಳೂರು ನಗರದ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಇದೇ ವೇಳೆ ಸಿಟ್ಟಿಗೆದ್ದ ಕಾರ್ಯಕರ್ತರು ಎಸ್ ಟಿ ಸೋಮಶೇಖರ್ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಅಡ್ಡಮತದಾನ ಮಾಡುವ ಮೂಲಕ ಪಕ್ಷಕ್ಕೆ ದ್ರೋಹ ಬಗೆದ ಹಿನ್ನೆಲೆ ಸೋಮಶೇಖರ್ ವಿರುದ್ಧ ಆಕ್ರೋಶಗೊಂಡ ಬಿಜೆಪಿ ಯುವಮೋರ್ಚಾ ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿರುವ ಸೋಮಶೇಖರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸೋಮಶೇಖರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ರಸ್ತೆಯಲ್ಲಿ ಟೈಯರ್ ಸುಟ್ಟು ಪ್ರತಿಭಟನೆ ಮಾಡಿದ ಕಾರ್ಯಕರ್ತರು, ಕಚೇರಿ ಮುಂದೆ ಹಾಕಿದ್ದ ಸೋಮಶೇಖರ್ ಫೋಟೋಗಳಿಗಗೆ ಮಸಿ ಬಳಿದರು. ಸೋಮಶೇಖರ್ ರಾಜೀನಾಮೆಗೆ ಒತ್ತಾಯಿಸಿದರು.