ಮಂಡ್ಯ: ಯಾರದ್ದೋ ಮೀಸಲಾತಿ ಕಿತ್ತು ಶೇ.2 ಮೀಸಲಾತಿ ಹೆಚ್ಚಿಸಿದ್ದಾರೆ. ಬಕಾಸುರನ ಹೊಟ್ಟೆಗೆ ಅರೆಪಾವು ಮಜ್ಜಿಗೆ ಕೊಟ್ಟಂತಾಗಿದೆ. ಒಕ್ಕಲಿಗರು (Okkaliga Reservation) ಬೇರೆಯವರ ಅನ್ನವನ್ನ ಕಿತ್ತು ತಿನ್ನುವವರಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ (Nanjavadhootha Swamiji) ಅಸಾಮಾಧಾನ ಹೊರಹಾಕಿದ್ದಾರೆ.
ಒಕ್ಕಲಿಗರಿಗೆ ಶೇ.4 ರಿಂದ ಶೇ.6 ಗೆ ಮೀಸಲಾತಿ ಏರಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಒಕ್ಕಲಿಗರು ರಾಜ್ಯದ ಜನಸಂಖ್ಯೆಯಲ್ಲಿ ಶೇ.16 ಇದ್ದಾರೆ. ನಾವು ಕೇಳಿದ್ದು ಶೇ.4 ರಿಂದ ಶೇ.16 ಗೆ ಮೀಸಲಾತಿ ಹೆಚ್ಚಳ ಮಾಡಿ ಅಂತ. ಆದರೆ ಯಾರದ್ದೋ ಶೇ.2 ಕಿತ್ತು ಶೇ.6 ಗೆ ಮೀಸಲಾತಿ ಏರಿಕೆ ಮಾಡಿದ್ದಾರೆ.
ಒಕ್ಕಲಿಗರು ಬೇರೆಯವರ ಅನ್ನವನ್ನು ಕಸಿದು ತಿನ್ನಬೇಕು ಎನ್ನುವವರಲ್ಲ. ನಾಡಿನ ಒಕ್ಕಲಿಗ ಮಕ್ಕಳು ತಾವು ದುಡಿದಿದ್ದನ್ನ ಹಂಚಿ, ಉಳಿದ್ರೆ ತಾವು ತಿನ್ನಬೇಕು ಎಂಬ ಧ್ಯೇಯ ಇಟ್ಟುಕೊಂಡಿದ್ದಾರೆ ಎಂದರು. ರಾಜ್ಯದಲ್ಲಿ ಶೇ.16 ಒಕ್ಕಲಿಗರಿದ್ದು 4 ಮೀಸಲಾತಿ ಕೊಟ್ಟಿದ್ರಿ. ಅದರಲ್ಲಿ ಹತ್ತಾರು ಸಮುದಾಯ ಸೇರಿಸಿದ್ದು, ಒಕ್ಕಲಿಗರಿಗೆ ಶೇ.1.5 ನಿಂದ ಶೇ.2 ಮೀಸಲಾತಿ ಮಾತ್ರ ಸಿಗೋದು. ಇದರಿಂದ ಎಲ್ಲ ಅವಕಾಶಗಳಿಂದ ಒಕ್ಕಲಿಗ ಮಕ್ಕಳು ವಂಚಿತರಾಗ್ತಿದ್ದಾರೆ. ಶೇ.6 ಗೆ ಮೀಸಲಾತಿ ಏರಿಸಿದ್ರು ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಸ್ತುತ ರಾಜಕೀಯ ಪಕ್ಷಗಳ ಪ್ರಣಾಳಿಕೆ ಬಗ್ಗೆ ನಂಜಾವಧೂತ ಸ್ವಾಮೀಜಿ ಬೇಸರ ವ್ಯಕ್ತಪಡಿಸಿ, ಹಲವು ರಾಜ್ಯಗಳ ಸರ್ಕಾರಗಳನ್ನ ನೋಡ್ತಿದ್ದೇವೆ. ಚೀಪ್ ಪಾಪ್ಯುಲಾರಿಟಿ ಪ್ರೋಗ್ರಾಂಗಳನ್ನ ಕೊಡ್ತಾರೆ. ಅಗತ್ಯಕ್ಕೂ ಮೀರಿ ಜನರ ಮೇಲೆ ಸಾಲದ ಹೊರೆ ಹೊರಿಸುತ್ತಾರೆ. ಅಂತಹದ್ದೇ ರಾಜ್ಯ ನಮ್ಮದು ಆಗಬಾರದು. ಅಭಿವೃದ್ದಿ ಇಲ್ಲ, ಆದರೆ ಎಲ್ಲ ಸೌಲಭ್ಯಗಳನ್ನ ಜನರ ಮನೆ ಬಾಗಿಲಿಗೆ ಕೊಡ್ತೀರಿ. ರಸ್ತೆ ಸರಿಯಿಲ್ಲ, ನೀರಾವರಿ ವ್ಯವಸ್ಥೆ ಇಲ್ಲ. ಮೂಲಭೂತ ಸೌಕರ್ಯಗಳಿಲ್ಲ. ಕೊನೆಗೆ ಅದೇ ಜನರು ನಿಮ್ಮ ಮೇಲೆ ತಿರುಗಿ ಬಿಳ್ತಾರೆ. ಆದ್ದರಿಂದ ದುಡಿಯ ವರ್ಗವನ್ನ ಸರ್ಕಾರಗಳು ಸೃಷ್ಟಿ ಮಾಡಬೇಕು. ನಮ್ಮ ಜನರನ್ನ ಸ್ವಶಕ್ತರಾಗಿ, ಆರ್ಥಿಕ ಸಬಲರನ್ನಾಗಿ ಮಾಡಬೇಕು. ಆ ತರಹದ ಯೋಜನೆಗಳನ್ನ ಈ ವ್ಯವಸ್ಥೆಯಲ್ಲಿ ತರಬೇಕು ಎಂದು ಸ್ವಾಮೀಜಿ ಹೇಳಿದರು.