ಕಲಬುರಗಿ: ಕೋಟಿ ಜನ್ಮ ಎತ್ತಿ ಬಂದರೂ ತಂದೆ-ತಾಯಿ ಋಣ ತೀರಿಸೋಕೆ ಆಗಲ್ಲ ಎನ್ನುತ್ತೇವೆ. ಮಕ್ಕಳಿಗಾಗಿ ಪೋಷಕರು ಮಾಡೋ ತ್ಯಾಗ ಯಾವುದಕ್ಕೂ ಸರಿ ಸಾಟಿ ಅಲ್ಲ. ಇಡೀ ಜಗತ್ತಿನಲ್ಲಿ ಮಕ್ಕಳ ಸಂತೋಷಕ್ಕಾಗಿ ತಂದೆ-ತಾಯಿ ತಮ್ಮ ಜೀವವನ್ನೇ ಚಪ್ಪಲಿ ಹಾಗೇ ಸವೆಸುತ್ತಾರೆ. ತಮಗೆ ಕಷ್ಟ ಬಂದ್ರೂ ಪರವಾಗಿಲ್ಲ. ನಾವು ಪಟ್ಟ ಕಷ್ಟ ಮಕ್ಕಳು ಪಡಬಾರದು ಎಂದು ತಮ್ಮ ಸಂತೋಷವನ್ನೇ ಧಾರೆ ಎರೆಯುತ್ತಾರೆ. ಆದರೆ, ಪಾಪಿ ಮಗನೋರ್ವ ಜೀವ ಕೊಟ್ಟ ತಂದೆಯನ್ನು ವಿಮೆ ಹಣಕ್ಕಾಗಿ ಕೊಂದು ಅಪಘಾತದ ಕಥೆ ಹೆಣೆದು ಓಡಾಡಿಕೊಂಡಿದ್ದ ಮಗನನ್ನು ಮಾಡಬೂಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸತೀಶ್ ಬಂಧಿತ ಆರೋಪಿಯಾಗಿದ್ದು, ಈತನೊಟ್ಟಿಗೆ ಸೇರಿ ಕೊಲೆಗೆ ಮಾಸ್ಟರ್ ಪ್ಲಾನ್ ರೂಪಿಸಿದ ಸತೀಶ್ ಗೆಳೆಯರಾದ ಅರುಣ್, ಯುವರಾಜ್ ಹಾಗೂ ರಾಕೇಶ್ ಎಂಬುವವರನ್ನು ಸಹ ಬಂಧಿಸಲಾಗಿದೆ. ಜು.8ರಂದು ಸತೀಶ್ ತನ್ನ ತಂದೆ ಕಾಳಿಂಗರಾವ್ ಜೊತೆ ಬೈಕ್ ಮೇಲೆ ಬರುತ್ತಿದ್ದ ವೇಳೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬೆಣ್ಣೂರ್ (ಬಿ) ಕ್ರಾಸ್ ಬಳಿ ಅಪಘಾತ ಸಂಭವಿಸಿತ್ತು. ಈ ವೇಳೆ ಕಾಳಿಂಗರಾವ್ ಸಾವನ್ನಪ್ಪಿದ್ದರು. ಸಣ್ಣ ಪುಟ್ಟ ಗಾಯಗಳೊಂದಿಗೆ ಸತೀಶ್ ಪ್ರಾಣಾಪಾಯದಿಂದ ಪಾರಾಗಿದ್ದ. ಈ ಘಟನೆ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ ಬಳಿಕ ಬೆಚ್ಚಿ ಬೀಳಿಸುವ ಅಂಶ ಬಯಲಿಗೆ ಬಂದಿದೆ. ಸತೀಶ್ ಹೋಟೆಲ್ ಉದ್ಯಮಕ್ಕೆ ಕೈ ಹಾಕಿ ವಿಪರೀತ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸುವ ಸಲುವಾಗಿ ತನ್ನ ತಂದೆಯನ್ನು ಅಪಘಾತದ ನೆಪದಲ್ಲಿ ಕೊಂದಿದ್ದು, ಅವರ ಹೆಸರಿನಲ್ಲಿರುವ ವಿಮೆ ಹಣ ಬಳಸಿಕೊಂಡು ತನ್ನ ಸಾಲ ತೀರಿಸಲು ತಂತ್ರ ರೂಪಿಸಿದ್ದ ಎಂಬುದು ತನಿಖೆಯಿಂದ ಬಯಲಾಗಿದೆ.
ತನ್ನ ತಂದೆಯನ್ನು ಕೊಲ್ಲುವ ದುರುದ್ದೇಶದಿಂದಲೇ ಅವರ ಹೆಸರಿನಲ್ಲಿ ಸತೀಶ್ ಎರಡು ವಿಮೆ ಮಾಡಿಸಿದ್ದ. ಅಪಘಾತದ ಬಳಿಕ ಒಂದು ವಿಮೆ ಕಂಪನಿಯಿಂದ 5 ಲಕ್ಷ ರೂ. ವಿಮೆ ಪಡೆದಿದ್ದ. ಮತ್ತೊಂದು ವಿಮೆ ಕಂಪನಿಯಿಂದ 22 ಲಕ್ಷ ರೂ. ವಿಮೆ ಹಣ ಪಡೆಯಲು ಪ್ರಯತ್ನ ನಡೆಸಿದ್ದ. ಆದರೆ ತನಿಖೆ ವೇಳೆ ಸತೀಶ್ ವರ್ತನೆಯ ಕುರಿತು ಪೊಲೀಸರಿಗೆ ಸಂಶಯ ವ್ಯಕ್ತವಾಗಿತ್ತು. ಇದರಿಂದ ತನಿಖೆಯ ಆಳ ಮತ್ತು ಅಗಲ ವಿಸ್ತರಿಸಿದ ಪೊಲೀಸರು, ಸತೀಶ್ ಆತನ ಗೆಳೆಯ ಅರುಣ ನೀಡಿದ ಮಾಸ್ಟರ್ ಪ್ಲಾನ್ ಪ್ರಕಾರ ತಂದೆಯ ಕೊಲೆಗೆ ವ್ಯವಸ್ಥಿತ ಸಂಚು ರೂಪಿಸಿರುವುದನ್ನು ಪತ್ತೆ ಹಚ್ಚಿದ್ದಾರೆ.
ಅನುಮಾನದ ಬೆನ್ನು ಹತ್ತಿದ ಪೊಲೀಸರು ಸತೀಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೋಟೆಲ್ ದಂಧೆ ಕೈಕೊಟ್ಟ ಕಾರಣಕ್ಕಾಗಿ ವಿಪರೀತ ಸಾಲವಾಗಿತ್ತು. ಇದರ ಪರಿಣಾಮವಾಗಿ ಸಾಲಗಾರರ ಕಾಟ ಹೆಚ್ಚಾಗಿತ್ತು. ಹಾಗಾಗಿ ತನ್ನ ತಂದೆಯನ್ನು ಕೊಂದರೆ ಅವರ ಹೆಸರಿನಲ್ಲಿರುವ ವಿಮೆ ಹಣ ಪಡೆದು ಸಾಲ ತೀರಿಸಬಹುದು ಎಂಬ ಲೆಕ್ಕಾಚಾರದೊಂದಿಗೆ ಈ ಕೃತ್ಯ ಎಸಗಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.