ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ಪರ್ಧಿ, ಟಿಕ್ ಟಾಕ್ ಸ್ಟಾರ್ ಎಂದೇ ಖ್ಯಾತರಾಗಿದ್ದ ಸೋನು ಶ್ರೀನಿವಾಸ್ ಗೌಡ ಬಂಧನವಾಗಿದೆ. ಮಗುವನ್ನು ಅನಧಿಕೃತವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ಸೋನು ಅನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಜಂಟಿ ಕಾರ್ಯಚರಣೆ ವೇಳೆ ಬಂಧನವಾಗಿದೆ.
ಈ ಹಿಂದೆಯಷ್ಟೇ ಸೋನು ಶ್ರೀನಿವಾಸ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಮಗು ದತ್ತು ಪಡೆದಿರುವ ಬಗ್ಗೆ ಟ್ರೋಲ್ ಆಗಿದ್ದರು. ಸ್ವತಃ ಸೋನು ಗೌಡ ಅವರೇ ಆ ಮಗುವನ್ನು ಇಟ್ಟುಕೊಂಡು ವಿಡಿಯೋ ಕೂಡ ಮಾಡಿದ್ದರು. ಈ ಮಗುವಿನ ಪರಿಚಯವನ್ನು ಸೋನು ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದರು.
ದತ್ತು ಪಡೆಯುವ ಯಾವುದೇ ನಿಯಮವನ್ನು ದತ್ತು ಪಾಲಿಸದೇ ಇರುವ ಕಾರಣಕ್ಕಾಗಿ ಮಕ್ಕಳ ಹಕ್ಕು ಕಸಿದಿರುವ ಆರೋಪ ಸೋನು ಮೇಲಿದೆ. ಉತ್ತರ ಕರ್ನಾಟಕದ 8 ವರ್ಷದ ಮಗು ಅದಾಗಿದ್ದು, ಸಿಂಪತಿ ಗಿಟ್ಟಿಸಿಕೊಂಡು ಸೆಲೆಬ್ರಿಟಿ ಆಗಲು ಸೋನು ಮುಂದಾಗಿದ್ದರು ಎನ್ನುವ ಆರೋಪ ಕೂಡ ಇದೆ.
ಮಗುವಿಗೂ ಹಾಗೂ ಮಗುವನ್ನು ದತ್ತು ಪಡೆಯುವ ವ್ಯಕ್ತಿಗೂ ಕನಿಷ್ಠ 25 ವರ್ಷಗಳ ಅಂತರ ಇರಬೇಕು. ಆದರೆ, ಆ ನಿಯಮ ಇಲ್ಲಿ ಪಾಲನೆ ಆಗಿಲ್ಲ. ಮಗುವಿಗೆ ಕಿರುಕುಳ ನೀಡಿದ ಆರೋಪವೂ ಸೋನು ವಿರುದ್ಧ ಕೇಳಿ ಬಂದಿದೆ. ಇನ್ನು, ಮಗುವಿನ ಐಡೆಂಟಿಟಿ, ಅವರ ಹೆಸರು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವಂತಿಲ್ಲ. ಈ ಕೆಲಸವನ್ನು ಸೋನು ಶ್ರೀನಿವಾಸ ಗೌಡ ಮಾಡಿದ್ದಾರೆ. ಇದೆಲ್ಲವೂ ಅವರಿಗೆ ಮುಳುವಾಗುವ ಸೂಚನೆ ಇದೆ.