ಮುಸ್ಲಿಂ ವ್ಯಾಪಾರಿಯೋರ್ವ ರೊಟ್ಟಿ ತಯಾರಿಸುವ ವೇಳೆ ಅದನ್ನು ತಂದೂರ್ನಲ್ಲಿ ಇಡುವ ಮುಂಚೆ ಅದಕ್ಕೆ ಉಗಿಯುತ್ತಿದ್ದ ವಿಡಿಯೋ ಒಂದು ವೈರಲ್ ಆಗಿದೆ. ಇದನ್ನು ರಾಮ, ಶಬರಿಗೆ ಹೋಲಿಕೆ ಮಾಡಿ ಬಾಲಿವುಡ್ ನಟ ಸೋನು ಸೂದ್ ಸಮರ್ಥಿಸಿಕೊಂಡು ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಸೋನು ಸೂದ್ ಸಮರ್ಥನೆಯನ್ನು ಬಿಜೆಪಿ ಸಂಸದೆ ಕಂಗನಾ ರಾಣವತ್ ಟೀಕಿಸಿದ್ದಾರೆ.
ಇತ್ತೀಚೆಗೆ ಅವರ ರಾಜಕೀಯ ನಿರ್ಧಾರದಿಂದಾಗಿ ಕೆಲ ವರ್ಗಗಳು ಅವರ ಟೀಕೆಗೆ ಇಳಿದಿವೆ. ಸೋನು ಸೂದ್, ತಮ್ಮ ಸಹೋದರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸಿ, ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು. ಇದು ಬಿಜೆಪಿ ಬೆಂಬಲಿಗರ ಕಣ್ಣು ಕೆಂಪಗಾಗಿಸಿತ್ತು. ಇದರ ಜೊತೆಗೆ ಸೋನು ಸೂದ್ ಮಾಡಿರುವ ಟ್ವೀಟ್ ಒಂದು ಬಿಜೆಪಿ ಬೆಂಬಲಿಗರು ಮಾತ್ರವೇ ಅಲ್ಲದೆ ಬಿಜೆಪಿಯ ಕೆಲ ಮುಖಂಡರ ಆಕ್ರೋಶಕ್ಕೂ ಕಾರಣವಾಗಿದೆ.
ಎಲ್ಲವೂ ಪ್ರಾರಂಭವಾಗಿದ್ದು ಉತ್ತರ ಪ್ರದೇಶದ ಸರ್ಕಾರ ನೀಡಿದ ಹೊಸ ಆದೇಶದಿಂದ. ಕನ್ವಾರ್ ಯಾತ್ರಾ ಮಾರ್ಗದ ಹೋಟೆಲ್ಗಳ ಮಾಲೀಕರು ತಮ್ಮ ಹೆಸರುಗಳನ್ನು ಅಂಗಡಿಯ ಮುಂಭಾಗ ಬರೆಯಬೇಕು ಎಂಬ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊರಡಿಸಿತು. ಆ ಮಾರ್ಗದಲ್ಲಿ ತೆರಳುವ ಪ್ರಯಾಣಿಕರಿಗೆ ಯಾವುದು ಹಿಂದೂಗಳ ಹೋಟೆಲ್, ಯಾವುದು ಮುಸ್ಲೀಮರ ಹೋಟೆಲ್ ಎಂಬುದು ತಿಳಿಯಲಿ ಎಂಬುದು ಈ ಆದೇಶದ ಉದ್ದೇಶವಾಗಿತ್ತು. ಆದೇಶದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ನಟ ಸೋನು ಸೂದ್, ‘ಎಲ್ಲ ಅಂಗಡಿಗಳ ಮುಂದೆ ‘ಮಾನವೀಯತೆ’ ಎಂಬುದೇ ಬೋರ್ಡ್ ಆಗಿರಬೇಕು’ ಎಂದಿದ್ದರು.
ಸೋನು ಸೂದ್ರ ಟ್ವೀಟ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇದರ ನಡುವೆ ಮುಸ್ಲಿಂ ವ್ಯಕ್ತಿಯೊಬ್ಬ ರೋಟಿಯನ್ನು ತಂದೂರ್ನಲ್ಲಿ ಇಡುವ ಮುಂಚೆ ಅದಕ್ಕೆ ಉಗಿಯುತ್ತಿದ್ದ ವಿಡಿಯೋ ಒಂದು ವೈರಲ್ ಆಯ್ತು. ಆ ವಿಡಿಯೋವನ್ನು ಸೋನು ಸೂದ್ರ ಟ್ರೋಲ್ ಮಾಡಲು ಬಳಲಾಯ್ತು. ವಿಡಿಯೋ ಶೇರ್ ಮಾಡಿದ ಸೋನು ಸೂದ್, ‘ಶಬರಿ, ರಾಮನ ಎಂಜಲು ಹಣ್ಣನನ್ನು ತಿಂದಳು. ಹಿಂಸೆಯನ್ನು ಸೋಲಿಸಲು ಈ ಸಹೋದರನ ಎಂಜಲು ಮೆತ್ತಿದ ರೋಟಿಯನ್ನು ನಾನೇಕೆ ತಿನ್ನದೇ ಇರುವೆ. ಮಾನವೀಯತೆ ಎಲ್ಲೆಡೆ ಪಸರಿಸಬೇಕು ಅಷ್ಟೆ’ ಎಂದಿದ್ದರು.
ಸೋನು ಸೂದ್ರ ಟ್ವೀಟ್ಗೆ ಹಲವರು ವಿಶೇಷವಾಗಿ ಬಿಜೆಪಿ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ, ಸೋನು ಸೂದ್ರ ಹೇಳಿಕೆಯನ್ನು ವ್ಯಂಗ್ಯ ಮಾಡಿರುವ ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್, ‘ಮುಂದೆ ಸೋನು ಸೂದ್ ತಮ್ಮದೇ ಆವಿಷ್ಕಾರದ ಮೂಲಕ ಹೊಸ ರಾಮಾಯಣದ ಕತೆ ಬರೆದು, ಬಾಲಿವುಡ್ನಲ್ಲಿ ಹೊಸ ರಾಮಾಯಣ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಅಸಲಿಗೆ ಕಂಗನಾ ಹಾಗೂ ಸೋನು ಸೂದ್ ನಡುವಿನ ವಿವಾದ ಹಳೆಯದ್ದು. ಕಂಗನಾ ನಿರ್ದೇಶನ ಮಾಡಿದ್ದ ‘ಮಣಿಕರ್ಣಿಕಾ’ ಸಿನಿಮಾದಲ್ಲಿ ಸೋನು ಸೂದ್ ನಟಿಸಿದ್ದರು. ಆದರೆ ಅವರನ್ನು ಚಿತ್ರದಿಂದ ಕೈಬಿಟ್ಟಿದ್ದ ಕಂಗನಾ, ಸೋನು ವಿರುದ್ಧ ಋಣಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಅಸಲಿಗೆ ಆ ಸಿನಿಮಾವನ್ನು ಸಹ ಮೊದಲು ಬೇರೊಬ್ಬರು ನಿರ್ದೇಶನ ಮಾಡಿದ್ದರು. ಅವರನ್ನೂ ಸಹ ಕಂಗನಾ ಸಿನಿಮಾದಿಂದ ಹೊರಗಟ್ಟಿದರು. ಆಗಿನಿಂದಲೂ ಸೋನು ಹಾಗೂ ಕಂಗನಾ ಪರಸ್ಪರರ ಬಗ್ಗೆ ಟೀಕೆ, ನಿಂದನೆ ಮಾಡುತ್ತಲೇ ಬಂದಿದ್ದಾರೆ.